LAXMI HEBBALKAR ON SANJAY PATIL STATEMENT: ಸಂಜಯ ಪಾಟೀಲ ನೀಚತನದ ಹೇಳಿಕೆ ಬಿಜೆಪಿಯ ಹಿಡನ್ ಅಜೆಂಡಾ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಶನಿವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆದ ಬಿಜೆಪಿಯ ಬಹಿರಂಗ ಸಭೆಯಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ನೀಡಿದ ನೀಚತನದ ಹೇಳಿಕೆ ಬಿಜೆಪಿಯ ಹಿಡನ್ ಅಜೆಂಡಾ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ವೀಡಿಯೋ ಬಿಡುಗಡೆ ಮಾಡಿರುವ ಸಚಿವರು, ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾದ ನನ್ನ ಬಗ್ಗೆ ಇಂತಹ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಸಂಜಯ ಪಾಟೀಲ ಅವರು, ಬಿಜೆಪಿಯವರಿಗೆ ಮಹಿಳೆಯರ ಬಗ್ಗೆ ಇರುವ ಗೌರವ ಎಂತಹುದು ಎನ್ನುವುದನ್ನು ತೋರಿಸಿದ್ದಾರೆ ಎಂದಿದ್ದಾರೆ.

ಬಿಜೆಪಿಯವರು ಕೇವಲ ಬಾಯಿ ಮಾತಿನಲ್ಲಿ ರಾಮ ಎಂದರೆ ಸಾಲುವುದಿಲ್ಲ, ಬೇಟಿ ಬಚಾವೋ, ಬೇಟಿ ಪಡಾವೋ ಎಂದರೆ ಸಾಲುವುದಿಲ್ಲ. ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸುವುದು ಹಿಂದೂ ಸಂಸ್ಕೃತಿ. ಮಾತನಾಡುವಾಗ ಹಿಂದೂ ಸಂಸ್ಕೃತಿ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಸಂಜಯ ಪಾಟೀಲ ಇಂತಹ ಹೇಳಿಕೆ ಮೂಲಕ ಈ ದೇಶದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಇಂತಹ ನೀಚತನದ ಹೇಳಿಕೆ ಅತ್ಯಂತ ಖಂಡನೀಯವಾದದ್ದು, ಕರ್ನಾಟಕದ ಎಲ್ಲ ಮಹಿಳೆಯರು ಇಂತಹ ಹಿಡನ್ ಅಜೆಂಡಾ ಇಟ್ಟು ಕೊಂಡಿರುವ ಬಿಜೆಪಿಯನ್ನು ತಿರಸ್ಕರಿಸಬೇಕು, ಖಂಡಿಸಬೇಕು ಎಂದು ಹೆಬ್ಬಾಳಕರ್ ಕರೆ ನೀಡಿದ್ದಾರೆ.

ಸಂಜಯ ಪಾಟೀಲ ಅವರು ಈ ರೀತಿಯ ನೀಚ ಹೇಳಿಕೆ ನೀಡುವುದು, ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಹೊಸದೇನಲ್ಲ. ಆದರೆ, ಈ ಹೇಳಿಕೆ ಕೊಡುವ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಾಜಿ ಮುಖ್ಯಮಂತ್ರಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ ಶೆಟ್ಟರ್, ಸಂಸದೆ ಮಂಗಲಾ ಅಂಗಡಿ ಮತ್ತಿತರರೂ ಇದ್ದರು. ಆದರೆ ಅವರೆಲ್ಲ ನಗುವ ಮೂಲಕ ಸಂಜಯ ಪಾಟೀಲ ಹೇಳಿಕೆಗೆ ಸಮ್ಮತಿ ಸೂಚಿಸಿದರೇ ವಿನಃ ಖಂಡಿಸಲಿಲ್ಲ. ವೇದಿಕೆಯಲ್ಲೇ ಯಾರಾದರೊಬ್ಬರು ಇದನ್ನು ಖಂಡಿಸಿದ್ದರೆ ಬಿಜೆಪಿಗೆ ಮಹಿಳೆಯರ ಬಗ್ಗೆ ಗೌರವ ಇದೆ ಎಂದು ಭಾವಿಸಬಹುದಿತ್ತು. ಆದರೆ ಹಾಗೆ ಮಾಡದೆ ಇರುವುದರಿಂದ ಬಿಜೆಪಿಯ ಮುಖವಾಡ ಕಳಚಿ ಬಿದ್ದಿದೆ. ಇಂತಹ ಹಿಡನ್ ಅಜೆಂಡಾ ಇಟ್ಟುಕೊಂಡಿರುವ ಬಿಜೆಪಿಯನ್ನು ಎಲ್ಲರೂ ತಿರಸ್ಕರಿಸೋಣ ಎಂದು ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದ್ದಾರೆ.

More News

You cannot copy content of this page