ಬೆಂಗಳೂರು: ನನ್ನ ಹೇಳಿಕೆಯಿಂದ ತಾಯಂದಿರಿಗೆ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ. ಮಹಿಳೆಯರನ್ನು ಅಪಮಾನಿಸಿಲ್ಲ, ಅಂತಹ ಜಾಯಮಾನವೂ ನನ್ನದಲ್ಲ. ವಿಷಾದಿಸುವುದಕ್ಕೆ ನನಗೆ ಯಾವ ಪ್ರತಿಷ್ಠೆಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು; ನಾಡಿನ ಜನರನ್ನು ಮರಳು ಮಾಡುತ್ತಿರುವ ಐದು ಗ್ಯಾರಂಟಿಗಳ ವಿರುದ್ಧ ಕಿಡಿಕಾರಿದರು.
ಅಳಬೇಡಪ್ಪ ಡಿ.ಕೆ.ಶಿವಕುಮಾರ್. ನಾನೇನು ವಿಷಾದ ವ್ಯಕ್ತಪಡಿಸುತ್ತೇನೆ. ನೀನು ದುಃಖ ಪಡಬೇಡಪ್ಪ. ನೀನು ಏನ್ ದುಃಖ ಪಟ್ಟಿದ್ದೀಯಾ ಎನ್ನುವುದನ್ನು ನೋಡಿದ್ದೇನೆ ಎಂದು ನೇರ ಡಿಕೆಶಿಯನ್ನು ತರಾಟೆಗೆ ತೆಗೆದುಕೊಂಡರು ಕುಮಾರಸ್ವಾಮಿ ಅವರು.
ಕಾಂಗ್ರೆಸ್ ಮಹಿಳಾ ನಾಯಕಿಯರಿಗೆ ದುಃಖ ಆಗಿದ್ದರೆ ಅದಕ್ಕೂ ವಿಷಾದ ವ್ಯಕ್ತಪಡಿಸುತ್ತೇನೆ. ಯಾರಿಗೇ ದುಃಖ ಆಗಿದ್ದರೂ ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ ನಾನು ಇವರಂತೆ ಕೆನ್ನೆ ನೆಕ್ಕೋದು, ಹೆಣ್ಣು ಮಕ್ಕಳಿಗೆ ರೇಟ್ ಫಿಕ್ಸ್ ಮಾಡಿದ ರೀತಿ ನಾನು ಮಾತನಾಡಿಲ್ಲ. ನಾನು ತಪ್ಪು ಮಾಡಿಲ್ಲ. ಜನರಿಗೇ ನನ್ನ ಹೇಳಿಕೆಯನ್ನು ಬಿಡುತ್ತೇನೆ. ಅವರೇ ತೀರ್ಮಾನ ಮಾಡಲಿ ಎಂದು ಹೇಳಿದರು ಅವರು.
ತಮ್ಮ ಹೇಳಿಕೆಯ ಮಾಧ್ಯಮ ವರದಿಗಳನ್ನು ಮಾಧ್ಯಮಗೋಷ್ಠಿಯಲ್ಲಿ ಓದಿದ ಕುಮಾರಸ್ವಾಮಿ ಅವರು; ಜನರಿಂದ ಕಿತ್ತುಕೊಂಡ ಹಣವನ್ನೇ ಕಾಂಗ್ರೆಸ್ಸಿನವರು ಗ್ಯಾರಂಟಿ ಎಂದು ಕೊಡುತ್ತಿದೆ. ಈ ಐದು ಗ್ಯಾರಂಟಿಗಳು ‘ಪಿಕ್ ಪಾಕೆಟ್ ಗ್ಯಾರಂಟಿಗಳು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ಲೋಕಸಭೆ ಕ್ಷೇತ್ರದ ತುರುವೇಕೆರೆಯಲ್ಲಿ ನಾನು ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದೆ. ಆ ಸಭೆಯಲ್ಲಿ ಹಲವಾರು ವಿಷಯಗಳನ್ನು ಪ್ರಸ್ತಾಪ ಮಾಡಿದ್ದೆ. ಕುಮಾರಸ್ವಾಮಿ ತಾಯಂದಿರಿಗೆ ಅಪಮಾನ ಮಾಡಿದ್ದಾರೆ. ಅವರು ಕ್ಷಮೆಗೆ ಅರ್ಹರಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. ವಾಯುವೆಗದಲ್ಲಿ ತಮ್ಮ ಶಾಸಕರು, ಮಾಜಿ ಶಾಸಕರು, ಮಹಿಳಾ ಘಟಕದವರ ಜತೆ ಝೂಮ್ ಮೀಟಿಂಗ್ ಮಾಡಿದ್ದಾರೆ. ಇಂದಿರಾ ಗಾಂಧಿ ಅವರು ಹತ್ಯೆಯಾದ ಸಮಯದಲ್ಲಿ ದುಃಖಪಟ್ಟಿದ್ದು ಬಿಟ್ಟರೆ ಅಷ್ಟು ದುಃಖಪಟ್ಟಿದ್ದು ಈ ದಿನವೇ ಎಂದು ಅವರು ಹೇಳಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟರು.
ಹೆಣ್ಣು ಮಕ್ಕಳನ್ನು ಕಿಡ್ನಾಪ್ ಮಾಡಿ ಬೇಲಿ ಹಾಕಿದಾಗ ದುಃಖ ಆಗಲಿಲ್ಲವೇ?
ತಾಯಂದಿರ ಕಣ್ಣೀರು ಈ ವ್ಯಕ್ತಿಗೆ ಈಗ ಕಾಣುತ್ತಿದೆಯಾ? ನಾನು ಡಿ.ಕೆ.ಶಿವಕುಮಾರ್ ಗೆ ಕೇಳಲು ಬಯಸುತ್ತೇನೆ. ಕೆಲ ಹೆಣ್ಣು ಮಕ್ಕಳನ್ನು ಅಪಹರಣ (ಕಿಡ್ನಾಪ್) ಮಾಡಿ ಅವರ ಅಪ್ಪ ಅಮ್ಮನಿಂದ ಜಮೀನು ಬರೆಸಿಕೊಂಡಾಗ ನಿಮಗೆ ದುಃಖ ಆಗಲಿಲ್ಲವೇ.. ಪಾಪ.. ಇದೆಲ್ಲವನ್ನು ನಾನು ಕಂಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಗಂಡಂದಿರ ಜೇಬಿನಿಂದ ಪಿಕ್ ಪಾಕೇಟ್
ಸಿಎಂ ನನ್ನ ಸಂಸ್ಕೃತಿ ತೋರಿಸುತ್ತೆ ಎಂದು ಹೇಳಿಕೆ ನೀಡಿದ್ದಾರೆ. ನಿಮ್ಮ ಪಕ್ಷದ ಸಂಸ್ಕೃತಿಯ ಬಗ್ಗೆ ಹೇಳಬೇಕೆ? ನನ್ನ ಬಳಿ ಕಂತೆ ಕಂತೆ ಮಾಹಿತಿ ಇದೆ. ನಾಡಿನ ತಾಯಂದಿರಿಗೆ ನಾನು ಕೇಳುವುದು ಇಷ್ಟೇ.. ಇವರು ₹2000 ನಿಮಗೆ ಕೊಟ್ಟು ನಿಮ್ಮ ಯಜಮಾನರ ಜೇಬಿಂದ ₹5000 ಕೀಳುತ್ತಿದ್ದಾರೆ. ನಿಮ್ಮ ಗಂಡಂದಿರ ಜೇಬಿನಿಂದ ಪಿಕ್ ಪಾಕೇಟ್ ಮಾಡುತ್ತಿದ್ದಾರೆ. ಇದರಿಂದ ಎಚ್ಚರದಿಂದ ಇರಿ ಎಂದು ತಾಯಂದಿರಿಗೆ ಹೇಳಿದ್ದೇನೆ. ನಿಮಗೆ ಆರ್ಥಿಕ ಶಕ್ತಿ ಬರಬೇಕು ಎಂದು ಭಾಷಣ ಮಾಡಿದ್ದೇನೆ.
2006-07 ಸಾರಾಯಿ ನಿಷೇಧ ಮಾಡಿದ್ದು ನಾನು. ಲಾಟರಿ ನಿಷೇಧ ಮಾಡಿದೆ. ನಿಷೇಧ ಮಾಡಬಾರದು ಎಂದು ನನಗೆ ಸಾವಿರಾರು ಕೋಟಿ ರೂಪಾಯಿ ಆಮಿಷ ಒಡ್ಡಿದರು. ಅದನ್ನೆಲ್ಲ ಕಾಲಲ್ಲಿ ಒದ್ದು ಸಾರಾಯಿ ನಿಷೇಧ ಮಾಡಿದ್ದೆ. ಎಲ್ಲೇ ಹೋದರೂ ತಾಯಂದಿರು ನನ್ನ ಬಳಿ ಬಂದು ಸಾರಾಯಿ, ಲಾಟರಿ ನಿಷೇಧ ಮಾಡಿ ಎಂದು ಕಣ್ಣೀರು ಹಾಕುತ್ತಿದ್ದರು. ಅವರಿಗಾಗಿ ಬೊಕ್ಕಸಕ್ಕೆ ನಷ್ಟ ಆಗುತ್ತದೆ ಎಂದು ಗೊತ್ತಿದ್ದರೂ ರಿಸ್ಕ್ ತೆಗೆದುಕೊಂಡು ನಿಷೇಧ ಮಾಡಿದೆ ಎಂದು ಹೇಳಿದರು. ಕಾಂಗ್ರೆಸ್ ನವರಿಗೆ ನನ್ನ ಬಗ್ಗೆ ಮಾತಾಡುವುದಕ್ಕೆ ವಿಷಯ ಇಲ್ಲ. ಅದಕ್ಕೆ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಸಚಿವರು, ನಾಯಕರು, ಕಾಂಗ್ರೆಸ್ ಮಹಿಳಾ ಘಟಕದವರು ಮಂಡ್ಯದಲ್ಲಿ ಗೋ ಬ್ಯಾಕ್ ಕುಮಾರಸ್ವಾಮಿ ಎಂದು ಪ್ರತಿಭಟನೆ ಮಾಡಿದ್ದಾರೆ. ಅಲ್ಲಿಗೆ ಬಂದ ಹೆಣ್ಣುಮಕ್ಕಳನ್ನು ಇಲ್ಲಿಗೆ ಯಾಕೆ ಬಂದಿದ್ದೀರಿ ಎಂದು ಕೇಳಿದರೆ, ಯಾಕೆ ಬಂದಿದ್ದೇವೆ ಎನ್ನುವುದು ಗೊತ್ತಿಲ್ಲ ಅಂತ ಹೇಳುತ್ತಾರೆ. ಆದರೆ ಆ ತಾಯಂದಿರಿಗೆ ತಮ್ಮ ಪಕ್ಷದ ನಾಯಕರೇ ಮಹಿಳೆಯರಿಗೆ ಮಾಡಿರುವ ಘೋರ ಅಪಮಾನದ ಬಗ್ಗೆ ಗೊತ್ತಿಲ್ಲ. ಇಂಥ ರಾಜಕೀಯ ಆಟಗಳಿಗೆ ನಾನೇನು ಹೆದರುವ ಆಸಾಮಿ ಅಲ್ಲ ಎಂದು ತಿರುಗೇಟು ಕೊಟ್ಟರು.
ಹೇಮಮಾಲಿನಿ, ಕಂಗನಾ ರಣಾವತ್ ಅವರಿಗೆ ಅಪಮಾನ ಪ್ರಕರಣ ಪ್ರಸ್ತಾಪಿಸಿದ ಹೆಚ್ಡಿಕೆ
ಮಿಸ್ಟರ್ ಶಿವಕುಮಾರ್.. ನಿಮ್ಮ ಪಕ್ಷದ ಉಸ್ತುವಾರಿ ಇದ್ದಾರೆ ಅಲ್ಲವೆ? ಅ ಮನುಷ್ಯ ನಟಿ ಹಾಗೂ ಸಂಸದರಾದ ಹೇಮಮಾಲಿನಿ ಅವರ ಬಗ್ಗೆ ಏನು ಹೇಳಿಕೆ ಕೊಟ್ಟಿದ್ದಾರೆ ಎನ್ನುವುದು ನಿಮಗೆ ಗೊತ್ತಿಲ್ಲವೇ? ರಂದೀಪ್ ಸುರ್ಜೆವಾಲ ಅವರು ಹೇಮಮಾಲಿನಿ ಅವರ ಬಗ್ಗೆ ನೀಡಿರುವ ಹೇಳಿಕೆಯನ್ನು ನಾನು ಇಲ್ಲಿ ಓದಿ ಹೇಳಲು ಆಗುವುದಿಲ್ಲ. ಅಷ್ಟು ಅಸಭ್ಯ, ಕೀಳು ಅಭಿರುಚಿಯಿಂದ ಕೂಡಿದೆ ಅವರ ಹೇಳಿಕೆ. ಶಿವಕುಮಾರ್.. ಮಹಿಳೆಯರಿಗೆ ಗೌರವ ಕೊಡುವ ರೀತಿ ಇದೇನಾ? ನೀವು ದೇಶದ ಮಹಿಳೆಯರನ್ನು ರಕ್ಷಣೆ ಮಾಡೋರು ಅಲ್ಲವೇ? ಎಂದು ಪ್ರಹಾರ ನಡೆಸಿದರು.
ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ನಟಿ ಕಂಗನಾ ರಣಾವತ್ ಬಗ್ಗೆ ಇವರ ಪಕ್ಷದ ವಕ್ತಾರರು ಸಾಮಾಜಿಕ ಜಾಲತಾಣದಲ್ಲಿ ಏನು ಬರೆದಿದ್ದರು? ಅಲ್ಲಿ ರೇಟ್ ಫಿಕ್ಸ್ ಮಾಡಿದಿರಿ ನೀವು. ಮಿಸ್ಟರ್ ಶಿವಕುಮಾರ್.. ಇದಕ್ಕೆ ಹೇಳಪ್ಪ ಉತ್ತರ. ನಿಮ್ಮ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಂಥ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಏನು ಹೇಳುತ್ತಾರೆ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ರಮೇಶ್ ಕುಮಾರ್ ಅವರ ‘ಆನಂದ ಪಡೆಯಿರಿ’ ಹೇಳಿಕೆ ಉಲ್ಲೇಖ
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ವಿಧಾನಸಭೆ ಕಲಾಪದಲ್ಲಿ ಏನು ಹೇಳಿದ್ದರು ಎನ್ನುವುದು ನಿಮಗೆ ಗೊತ್ತಿರಬೇಕಲ್ಲವೇ ಶಿವಕುಮಾರ್? ಅವರು ಹೇಳಿದ್ದನ್ನು ಮರೆತಿದ್ದೀರಾ ಹೇಗೆ? ರಮೇಶ್ ಕುಮಾರ್ ಅವರು ಸದನದಲ್ಲಿ ಆನಂದ ಪಡೆಯಿರಿ ಅಂತ ಹೇಳಿದ್ದರು ಅಲ್ಲವಾ? ಅವರು ಯಾಕಾಗಿ ಈ ಮಾತು ಹೇಳಿದರು ಎನ್ನುವುದು ಗೊತ್ತಿರಬೇಕಲ್ಲವೇ ನಿಮಗೆ? ಇಂಥ ನಿಮ್ಮಿಂದ ನಾನು ಗೌರವ ಕೊಡುವುದನ್ನು ಕಲಿಯಬೇಕೇ ರಮೇಶ್ ಕುಮಾರ್ ಹೇಳಿಕೆ ಪ್ರಸ್ತಾಪಿಸಿ ಡಿಕೆಶಿ ಮೇಲೆ ವಾಗ್ದಾಳಿ ನಡೆಸಿದರು ಮಾಜಿ ಮುಖ್ಯಮಂತ್ರಿಗಳು.
ಗಂಡಸ್ತನ ಹೇಳಿಕೆ ಗಮನಕ್ಕೆ ಬರಲಿಲ್ಲವೇ?
ಮದ್ದೂರಿನಲ್ಲಿ ನಿಮ್ಮ ಶಾಸಕರೊಬ್ಬರು ಗಂಡಸ್ತನ ಬಗ್ಗೆ ಹೇಳಿಕೆ ನೀಡಿದ್ದರು. ನಮ್ಮ ಪಕ್ಷದ ಮಾಜಿ ಶಾಸಕರನ್ನು ಅವಹೇಳನ ಮಾಡಿದ್ದರು. ನಿಮ್ಮ ಪದ ಬಳಕೆ ನಿಮ್ಮ ಗಮನಕ್ಕೆ ಬರಲಿಲ್ಲವೇ? ನಾನು ತಡೆಯದೇ ಇದ್ದಿದ್ದರೆ ಆ ವ್ಯಕ್ತಿಯ ಮನೆಗೆ ಜನರನ್ನು ನುಗ್ಗಿಸುತ್ತಿದ್ದರು. ಇತ್ತೀಚೆಗೆ ಶಾಮನೂರು ಶಿವಶಂಕರಪ್ಪ ಅವರು, ಮಹಿಳೆಯರು ಅಡುಗೆ ಮನೆಯಲ್ಲಿ ಇರಲು ಲಾಯಕ್ಕು ಎಂದು ಹೇಳಿದ್ದರಲ್ಲವೇ? ಇದೆಲ್ಲಾ ನಿಮ್ಮ ಗಮನಕ್ಕೆ ಬಂದಿಲ್ಲವೇ? ಯಾರಿಗೆ ಯಾವ ಶಿಕ್ಷೆ ಕೊಟ್ಟಿದ್ದೀಯಪ್ಪಾ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ಜನರಿಗೆ ಏನು ಒಳ್ಳೆಯದು ಮಾಡಿದ್ದಾರೆ? ಅವರನ್ನು ನಂಬಿದ್ದಕ್ಕೆ ಏನೆಲ್ಲಾ ಆಯಿತು ಎನ್ನುವುದು ನನಗೆ ಗೊತ್ತಿದೆ. ಉಪ ಚುನಾವಣೆ, 2019ರ ಲೋಕಸಭೆ ಚುನಾವಣೆಯಲ್ಲಿ ಕನ್ನ ಕೊರೆದರು ಎಂದರು ಕುಮಾರಸ್ವಾಮಿ ಅವರು.
ದೇವೇಗೌಡರನ್ನು ಪ್ರಧಾನಿ ಮಾಡಿದ್ದು ನಾವು ಅಂತಾರೆ ಸಿದ್ದರಾಮಯ್ಯ. ಅದೇ ದೇವೇಗೌಡರನ್ನು ಪ್ರಧಾನಿ ಸ್ಥಾನದಿಂದ ಯಾಕೆ ಇಳಿಸಿದಿರಿ? ಸಿದ್ದರಾಮಯ್ಯ ಅವರೇ ಉತ್ತರ ಕೊಡಿ. ಇವತ್ತು ನಮ್ಮ-ಬಿಜೆಪಿ ಸಂಬಂಧದ ಬಗ್ಗೆ ಮಾತನಾಡುತ್ತೀರಿ. ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಎನ್ನುತ್ತೀರಿ. 2018ರಲ್ಲಿ ನಮ್ಮ ಮನೆಗೆ ನೀವು ಬಂದಾಗ ನೀವು ನಾಯಿ ಸ್ಥಾನದಲ್ಲಿ ಇದ್ದೀರಾ? ಅಥವಾ ಹಳಸಿದ ಅನ್ನದ ಸ್ಥಾನದಲ್ಲಿ ಇದ್ದೀರಾ? ಅನ್ನಕ್ಕೆ ನಾನಂತೂ ಅಪಮಾನ ಮಾಡುವುದಿಲ್ಲ ಎಂದು ಪ್ರಶ್ನಿಸಿದರು ಕುಮಾರಸ್ವಾಮಿ ಅವರು.
ಬಾಕ್ಸ್
||ಅಪಾರ್ಟ್ಮೆಂಟ್ ನಿವಾಸಿಗಳಿಗೆ ಡಿಕೆಶಿ ಬೆದರಿಕೆ||
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಪಾರ್ಟ್ಮೆಂಟ್ ನಿವಾಸಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಹೊಸ ಅಪಾರ್ಟ್ಮೆಂಟ್ ಅಕ್ಯೂಪೆನ್ಸಿ ಸರ್ಟಿಫಿಕೇಟ್ ಬೇಕಾದರೆ, NOC ಬೇಕಾದರೆ ನನ್ನ ತಮ್ಮನಿಗೆ ಮತ ಹಾಕಿ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ. ವೋಟು ಕೊಟ್ಟರೆ ಕಾವೇರಿ ನೀರು ಬಿಡ್ತೀನಿ ಎಂದು ಧಮ್ಕಿ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಮೇಲೆ ಆರೋಪ ಮಾಡಿದರು.
- ||ನನಗೆ ಇರುವುದು ಬಿಡದಿ ಬಳಿ ಜಮೀನು ಮಾತ್ರ; ಡಿಕೆಶಿ ಯಾವ ಕಷ್ಟಪಟ್ಟು ಇಷ್ಟು ಆಸ್ತಿ ಸಂಪಾದಿಸಿದ್ದಾರೆ?||
ಬೆಂಗಳೂರಿನ ಸುತ್ತಮುತ್ತ 1000 ಎಕರೆ ಕುಮಾರಸ್ವಾಮಿಗೆ ಜಮೀನು ಇದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ಕೊಟ್ಟ ಮಾಜಿ ಮುಖ್ಯಮಂತ್ರಿಗಳು; ಹೌದು.. ನನ್ನದು ಬಿಡದಿಯ ಬಳಿ 45-48 ಎಕರೆ ಭೂಮಿ ಇದೆ. ಸಿನಿಮಾದಲ್ಲಿ ದುಡಿದ ದುಡ್ಡಿನಲ್ಲಿ ಅದನ್ನು ಖರೀದಿ ಮಾಡಿದ್ದು. ರಾಜಕೀಯಕ್ಕೆ ಬರುವುದಕ್ಕೆ ಮೊದಲೇ ಈ ಜಾಮೀನು ಖರೀದಿ ಮಾಡಿದ್ದೇನೆ. ನಾನು ತೋಟದಲ್ಲಿ ರೆಸಾರ್ಟ್ ಮಾಡಿಲ್ಲ. ಬಂದು ನೋಡಪ್ಪ. ಕಲ್ಲಂಗಡಿ, ಬಾಳೆ, ಕೊಬ್ಬರಿ ಬೆಳೆದಿದ್ದೇನೆ. ಎಲ್ಲಾ ವಿಡಿಯೋ ಇದೆಯಪ್ಪ. ದೇವೇಗೌಡರು ವಿರೋಧ ಪಕ್ಷದಲ್ಲಿ ಇದ್ದಾಗಲೂ ನಿಕ್ಕರ್ ಹಾಕಿಕೊಂಡು ಶನಿವಾರ, ಭಾನುವಾರ ತೋಟದ ಕೆಲಸ ಮಾಡುತ್ತಿದ್ದರು ಎಂದರು.
ಡಿ.ಕೆ.ಶಿವಕುಮಾರ್ ಯಾವ ಕಷ್ಟಪಟ್ಟು ಆಸ್ತಿ ಸಂಪಾದನೆ ಮಾಡಿದ್ದಾರೆ? ಕಲ್ಲು ಬಂಡೆ ಕದ್ದು ವಿದೇಶಕ್ಕೆ ಸಾಗಿಸಿರೋದೇ ಅವರ ಕೆಲಸ. ಹೇಳಿದರೆ ಆ ವ್ಯಕ್ತಿಯ ಬಗ್ಗೆ ಕಂತೆ ಕಂತೆ ಹೇಳಬಹುದು. ಅವರಿಗೆ ನನ್ನದೇ ಆಪತ್ತು. ಅದಕ್ಕೆ ನನ್ನ ವಿರುದ್ದ ಮಾತಾಡ್ತಿದ್ದಾರೆ. 8 ಒಕ್ಕಲಿಗರಿಗೆ ಸೀಟು ಕೊಟ್ಟಿದ್ದೀನಿ ಅಂತಾರೆ. ಕೊಟ್ಟು ಏನ್ ಆಯ್ತು. ಸಿಎಂ ಆಗೋ ಅವಕಾಶ ಇದೆ, ಆಶೀರ್ವಾದ ಮಾಡಿ ಅಂದರು. ಈಗ ಒಂದು ಸಾರಿ ಪೇಪರು ಪೆನ್ನು ಕೊಟ್ಟು ತಮಿಳುನಾಡಿಗೆ ನೀರು ಹೋಗ್ತಿಲ್ಲವಾ? ಈಗ ಮತ್ತೆ ಪೆನ್ನು ಪೇಪರ್ ಕೊಡಬೇಕಾ? ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಮಹಿಳಾ ಆಯೋಗ ದೂರು ದಾಖಲು ಮಾಡಿಕೊಂಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ; ಮಹಿಳಾ ಆಯೋಗ ನೊಟೀಸ್ ಕೊಡಲಿ ಉತ್ತರ ಕೊಡ್ತೀನಿ ಎಂದು ಉತ್ತರಿಸಿದರು.
ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿ ಪಕ್ಷದ ಅನೇಕ ಮಹಿಳಾ ಮುಖಂಡರು ಉಪಸ್ಥಿತರಿದ್ದರು.