PRAHLAD JOSHI NOMINATION: ಮಾಜಿ ಸಿಎಂಗಳ ಸಾರಥ್ಯದಲ್ಲಿ ಪ್ರಹ್ಲಾದ ಜೋಶಿ ನಾಮಪತ್ರ ಸಲ್ಲಿಕೆ: ಬೃಹತ್ ಮೆರವಣಿಗೆ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇಂದು ನಾಮಪತ್ರ ಸಲ್ಲಿಸಿದರು.

ಮಾಜಿ ಸಿಎಂ ಬಿಎಸ್ ವೈ ಮತ್ತು ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಅದ್ದೂರಿ ಮೆರವಣಿಗೆಯಲ್ಲಿ ಸಾಗಿದ ಜೋಶಿ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.

ಜಿಲ್ಲಾ ಚುನಾವಣಾಧಿಕಾರಿ ದಿವ್ಯಾ ಪ್ರಭು ಅವರಿಗೆ ಪ್ರಹ್ಲಾದ ಜೋಶಿ ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಮಾಜಿ ಸಂಸದ ವಿಜಯ ಸಂಕೇಶ್ವರ, ಪ್ರಭಾಕರ್ ಕೋರೆ, ಮಾಜಿ ಸಚಿವ ಸಿಸಿ ಪಾಟೀಲ ಹಾಗೂ ಶಾಸಕರಾದ ಅರವಿಂದ ಬೆಲ್ಲದ್, ಮಹೇಶ ತೆಂಗಿನಕಾಯಿ, ಎಂ.ಆರ್. ಪಾಟೀಲ್ ಸಾಥ್ ನೀಡಿದರು.

ದೇವಸ್ಥಾನ-ಮಠಕ್ಕೆ ಭೇಟಿ : ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಹ್ಲಾದ ಜೋಶಿ ಅವರು ಹುಬ್ಬಳ್ಳಿ ಹುಬ್ಬಳ್ಳಿ-ಧಾರವಾಡದ ವಿವಿಧ ಮಠ- ಮಾನ್ಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ, ಶ್ರೀಗಳ ಆಶೀರ್ವಾದ ಪಡೆದರು.

ಹುಬ್ಬಳ್ಳಿ ಸಿದ್ಧಾರೂಢ ಮಠ, ಮುರುಸಾವಿರ ಮಠ, ಧಾರವಾಡ ಮುರುಘಾ ಮಠ, ಭವಾನಿ ನಗರ ಮತ್ತು ನವನಗರದ ರಾಘವೇಂದ್ರ ಸ್ವಾಮಿ ಮಠಗಳಿಗೆ ತೆರಳಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಅಲ್ಲದೇ, ನಾಗಶೆಟ್ಟಿಕೊಪ್ಪದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಧಾರವಾಡ ಲಕ್ಷ್ಮಿನರಸಿಂಹ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಮೂರುಸಾವಿರ ಮಠದ ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ, ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಜೋಶಿ ಅವರನ್ನು ಆಶೀರ್ವದಿಸಿ, ಶುಭ ಹಾರೈಸಿದರು.

ವರಿಷ್ಟರೊಂದಿಗೆ ಬೃಹತ್ ಮೆರವಣಿಗೆ: ದೇವಸ್ಥಾನ-ಮಠಗಳ ಭೇಟಿ ಬಳಿಕ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಪಕ್ಷದ ವರಿಷ್ಟರೊಂದಿಗೆ ಧಾರವಾಡದ ಶಿವಾಜಿ ವೃತ್ತದಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ಆರಂಭಿಸಿದರು.

ಪ್ರಮುಖ ಬೀದಿಗಳಲ್ಲಿ ಸಾಗಿದ ಬೃಹತ್ ಮೆರವಣಿಗೆಯಲ್ಲಿ ಹುಬ್ಬಳ್ಳಿ-ಧಾರವಾಡ, ಶಿಗ್ಗಾವಿ-ಸವಣೂರು ಸೇರಿದಂತೆ ಕ್ಷೇತ್ರದ ವಿವಿಧೆಡೆಯಿಂದ ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದ್ದರು. ಜೆಡಿಎಸ್ ಪ್ರಮುಖರು, ಕಾರ್ಯಕರ್ತರು ಸಹ ಪಾಲ್ಗೊಂಡು ಮೈತ್ರಿಕೂಟದ ಬಲ ಪ್ರದರ್ಶಿಸಿದರು.

ಕೇಸರಿಯಲ್ಲಿ ಕಂಗೊಳಿಸಿದ ವಿದ್ಯಾಕಾಶಿ: ಇಂದು ನಡೆದ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸಾಗರೋಪಾದಿಯಂತೆ ಬಂದಿದ್ದರು. ಎಲ್ಲೆಡೆಯು ಕೇಸರಿ ಧ್ವಜ, ನಾಯಕರ ಕಟೌಟ್ಗಳ ಭರಾಟೆ ಬಿಜೆಪಿ ನಾಯಕರ ವಿಶ್ವಾಸ ಇಮ್ಮಡಿಗೊಳಿಸಿದಂತಿತ್ತು.

ಧನ್ಯವಾದ ಅರ್ಪಿಸಿದ ಜೋಶಿ:
ದೇಶದ ಒಳಿತಿಗಾಗಿ ಎಲ್ಲರೂ ನರೇಂದ್ರ ಮೋದಿಯವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲ ನೀಡಿದ್ದಾರೆ. ಕಾರ್ಯಕರ್ತರ ಅತೀವ್ರ ಬೆಂಬಲ ಈ ಬಾರಿಯೂ ಬಿಜೆಪಿ ಗೆಲುವು ನಿಶ್ಚಿತ ಎಂಬ ಆತ್ಮವಿಶ್ವಾಸ ಮೂಡಿಸಿದೆ ಎಂದು ಸಚಿವ ಜೋಶಿ ಪ್ರತಿಕ್ರಿಯಿಸಿದರು.

ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮಾಜಿ ಸಂಸದರಾದ ವಿಜಯ್ ಸಂಕೇಶ್ವರ್, ಪ್ರಭಾಕರ್ ಕೋರೆ, ಮಾಜಿ ಸಚಿವರಾದ ಭೈರತಿ ಬಸವರಾಜ್, ಸಿ.ಸಿ.ಪಾಟೀಲ್ ಮುಂತಾದವರು ಸಾಥ್ ನೀಡಿ ತಮ್ಮ ಗೆಲುವಿನ ಮನೋಬಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಎಂ.ಆರ್. ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ನಾಗರಾಜ್ ಛಬ್ಬಿ, ಮಹಾಂತೇಶ್ ಕವಟಗಿಮಠ, ಶಂಕರ್ ಪಾಟೀಲ್ ಮುನೇನಕೊಪ್ಪ, ಸಿ.ಟಿ.ರವಿ, ಅಮೃತ್ ದೇಸಾಯಿ, ಸೀಮಾ ಮಸೂತಿ, ಕೆಎಲ್ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಿಪ್ಪಣ್ಣ ಮಜ್ಜಗಿ ಹಾಗು ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

More News

You cannot copy content of this page