INDIA Will Come To Power: ಸರ್ವೇಗಳಲ್ಲಿ ನಂಬಿಕೆಯಿಲ್ಲ: ಎನ್ ಡಿಎ ಅಧಿಕಾರಕ್ಕೆ ಬರುವುದಿಲ್ಲ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ” ಡಿಸಿಎಂ ಡಿ.ಕೆ.ಶಿವಕುಮಾರ್

ಕಾಂಗ್ರೆಸ್ ಪಕ್ಷಕ್ಕೆ ಏಕೆ ಮತ ಹಾಕಬೇಕು ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ನಾನು ಕರ್ನಾಟಕದ ಜನತೆಗೆ ಬಿಜೆಪಿಗೆ ಏಕೆ ಮತ ಹಾಕಬೇಕು ಎಂದು ಕೇಳುತ್ತೇನೆ? ಬಿಜೆಪಿ ಜನರಿಗೆ ಏನೇನು ಮಾತು ಕೊಟ್ಟಿತ್ತು, ಆ ಮಾತನ್ನು ಉಳಿಸಿಕೊಂಡಿದ್ದಾರಾ? ಡಬಲ್ ಎಂಜಿನ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿತ್ತೇ? ಎಂದಿಗೂ ಬಿಜೆಪಿಗೆ ರಾಜ್ಯದಲ್ಲಿ ಬಹುಮತ ಸಿಕ್ಕಿಲ್ಲ. ಪ್ರತಿ ಬಾರಿಯೂ ಮೈತ್ರಿ ಹಾಗೂ ಆಪರೇಷನ್ ಮಾಡಿ ಅವರು ಸರ್ಕಾರ ರಚಿಸಿದ್ದಾರೆ. ರಾಷ್ಟ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಇದ್ದಾಗ ಅವರು ನುಡಿದಂತೆ ನಡೆದಿಲ್ಲ. ಹೀಗಿರುವಾಗ ಅವರಿಗೆ ಮತ ಕೇಳುವ ನೈತಿಕತೆ ಇದೆಯೇ?

ಉತ್ತರ ಕರ್ನಾಟಕಕ್ಕೆ ಮಹದಾಯಿ ಯೋಜನೆ ಘೋಷಣೆ ಮಾಡಿಸಿದ್ದೇವೆ ಎಂದು ಜೋಶಿ, ಬೊಮ್ಮಾಯಿ ಸಂಭ್ರಮಾಚರಣೆ ಮಾಡಿದರು. ಆದರೆ ಇದುವರೆಗೂ ಸಹ ಪರಿಸರ ಇಲಾಖೆಯ ಅನುಮತಿ ಪತ್ರ ಕೊಡಿಸಲು ಸಾಧ್ಯವಾಗಿಲ್ಲ. ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ಹೋರಾಟ ಮಾಡಿದ ನಂತರ ಬೊಮ್ಮಾಯಿ ಅವರು 1 ಸಾವಿರ ಕೋಟಿ ಅನುದಾನ ಮೀಸಲಿಡುತ್ತೇವೆ ಎಂದರು. ಆದರೆ ಅಣೆಕಟ್ಟು ಕಟ್ಟಲು ಅನುಮತಿ ಸೇರಿದಂತೆ ಅಡೆತಡೆಗಳನ್ನು ನಿವಾರಣೆ ಮಾಡಿಸಿದ್ದಾರಾ? ಮೇಕೆದಾಟು ಯೋಜನೆಯಿಂದ ಕನಕಪುರಕ್ಕೆ ನೀರು ಬೇಕಾಗಿಲ್ಲ. ಬರಗಾಲದ ಸಮಯದಲ್ಲಿ ತಮಿಳುನಾಡಿಗೆ ನೀಡಬೇಕಾದ ನೀರು ಕೊಡಲು ಸಾಧ್ಯವಾಗುತ್ತದೆ. ಕೊಳವೆಬಾವಿಗಳು ತುಂಬುತ್ತವೆ, ಆದರೂ ಬಿಜೆಪಿ ಮುಂದುವರೆಯಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ಅಲ್ಲಿ 5,300 ಕೋಟಿ ಮೀಸಲಿಡಲಾಯಿತು. ಇದನ್ನು ಬೊಮ್ಮಾಯಿ ಅವರೂ ತಮ್ಮ ಬಜೆಟ್ ಅಲ್ಲಿಯೂ ಸೇರಿಸಿಕೊಂಡರು. ಆದರೆ ಒಂದೇ ಒಂದು ರೂಪಾಯಿ ಬಿಡುಗಡೆ ಆಗಲಿಲ್ಲ.
ನಮ್ಮ ಸಿಎಂ, ಕೃಷಿ, ಕಂದಾಯ ಸಚಿವರು ಮನವಿ ಮಾಡಿದರು. ಬರಗಾಲದಲ್ಲಿ ನರೇಗಾ ಯೋಜನೆಯಡಿ ಕೆಲಸದ ದಿನಗಳನ್ನು 100 ರಿಂದ 150 ಕ್ಕೆ ಹೆಚ್ಚಿಸಲು ಅವಕಾಶವಿದ್ದರೂ ಮಾಡಲಿಲ್ಲ. ಬಿಜೆಪಿಯ ರಾಜ್ಯದ ಒಬ್ಬನೇ ಒಬ್ಬ ಸಂಸದ ಈ ಬಗ್ಗೆ ಬಾಯಿ ಬಿಡಲಿಲ್ಲ, ಹೋರಾಟ ಮಾಡಲಿಲ್ಲ. 14 ಜನ ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ. ಏಕೆಂದರೆ ಅವರ ಮುಖಗಳಿಗೆ ಮಾನ್ಯತೆ ಇಲ್ಲ. ಮೋದಿ ಅವರು ನನಗೆ ಮತ ನೀಡಿ ಎಂದರು. ಇದರ ಅರ್ಥ ಪಕ್ಷದ ವರ್ಚಸ್ಸು ರಾಜ್ಯದಲ್ಲಿ ಮಂಕಾಗಿದೆ.

ಕಾಂಗ್ರೆಸ್ ಅವರು ಸ್ವಿಸ್ ಬ್ಯಾಂಕ್ ಅಲ್ಲಿ ಕಪ್ಪುಹಣ ಇಟ್ಟಿದ್ದಾರೆ ಅದನ್ನು ತಂದು ಜನ್ ಧನ್ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು. ಎಲ್ಲಿ ಆ ಹಣ? ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು. 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಕೊಡಲಿಲ್ಲ. 12 ಲಕ್ಷ ಜನ ಉದ್ದಿಮೆದಾರರು ಬಿಜೆಪಿ ಕಾಟ ತಡೆಯಲಾದರೆ ಈ ದೇಶ ಬಿಟ್ಟು ಹೋಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ 20 ಲಕ್ಷ ಕೋಟಿ ಕೊಡುತ್ತೇವೆ ಎಂದರು. ಆದರೆ ಕೊಡಲಿಲ್ಲ. ಕಾರ್ಮಿಕರನ್ನು ಊರಿಗೆ ತಲುಪಿಸುವ ಬಸ್ಗಳಿಗೆ ಟಿಕೆಟ್ ಗೆ ಮೂರು ಪಟ್ಟು ಹಣ ನಿಗಧಿ ಮಾಡಿದ್ದರು. ಕಾಂಗ್ರೆಸ್ ಹೋರಾಟದ ನಂತರ ಬದಲಾವಣೆ ಮಾಡಲಾಯಿತು. 20 ಲಕ್ಷ ಕೋಟಿಯನ್ನು ಯಾರಿಗೆ ಕೊಟ್ಟಿದ್ದಾರೆ ಲೆಕ್ಕಕೊಡಲಿ.
ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಮತ್ತು ವಿಪಕ್ಷಗಳ ನಾಯಕರ ಮೇಲೆ ಇಡಿ, ಐಟಿಗಳನ್ನು ಬಳಸುತ್ತಿದ್ದಾರೆ. ಬಿಜೆಪಿಯವರೇ ನಿಮ್ಮ ಬಳಿ ಯಾವ ವಾಷಿಂಗ್ ಮೆಷಿನ್ ಇದೆ. ಎಲ್ಲಾ ತನಿಖಾ ಸಂಸ್ಥೆಗಳಿಗೆ ನೀವೆ ಅನುಮತಿ ನೀಡಿ ಕಾಂಗ್ರೆಸ್ ಪಕ್ಷದ ಎಲ್ಲಾ ಹಂತದ ನಾಯಕರು ಮತ್ತು ಒಂದಷ್ಟು ಉದ್ದಿಮೆದಾರರನ್ನು ಹೆದರಿಸುವ ಕೆಲಸ ಮಾಡುತ್ತಿದೆ.
ಬಿಜೆಪಿ ಸ್ವಂತ ಬಲದ ಮೇಲೆ ಗೆಲ್ಲುವುದಾದರೆ ಏಕೆ ಇತರೇ ಪಕ್ಷಗಳನ್ನು ಜೊತೆಯಲ್ಲಿ ಸೇರಿಸಿಕೊಳ್ಳುತ್ತಿದೆ. ಎಲ್ಲಾ ಪಕ್ಷಗಳ ನಾಯಕರನ್ನು ಹುಡುಕಿ, ಹುಡುಕಿ ಏತಕ್ಕೆ ಪಕ್ಷ ಸೇರಿಸಿಕೊಳ್ಳುತ್ತಿದ್ದಾರೆ. ಮಾನ್ಯ ಮೋದಿ ಅವರೇ ಇದೇ ಒಂದು ವರ್ಷದ ಕೆಳಗೆ ವಿಧಾನಸಭಾ ಚುನಾವಣೆಯ ವೇಳೆ ಜೆಡಿಎಸ್ ಬಗ್ಗೆ ಏನು ಹೇಳಿದ್ದೀರಿ ನೆನಪಿದೆಯೇ? ದಳದವರು ಆಗ ಸರಿ ಇರಲಿಲ್ಲ. ಈಗ ಸರಿ ಹೋದರೆ?
ಕರ್ನಾಟಕ ತೆರಿಗೆ ವಿಚಾರವಾಗಿ ಸಾಕಷ್ಟು ಅನ್ಯಾಯ ಅನುಭವಿಸುತ್ತಿದೆ. ಡಿ.ಕೆ.ಸುರೇಶ್ ಅವರು ತಪ್ಪು ಮಾತು ಹೇಳಿಲ್ಲವಲ್ಲ. ಆದರೂ ನೀವೆ ದೇಶವನ್ನು ಇಬ್ಬಾಗ ಮಾಡುವ ಮಾತುಗಳನ್ನು ಆಡಿದಿರಿ. ಕಾಂಗ್ರೆಸ್ ಈ ದೇಶವನ್ನು ಒಗ್ಗಟ್ಟಾಗಿ ಇಟ್ಟುಕೊಂಡು ಬಂದಿದೆ. ಸಂವಿಧಾನ, ರಾಷ್ಟ್ರಧ್ವಜ ನೀಡಿದ್ದೇವೆ. ಸಾವಿರಾರು ಜಾತಿ,ಭಾಷೆ ಇದ್ದರೂ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ದೇಶವನ್ನು ಕಾಂಗ್ರೆಸ್ ಒಗ್ಗಟ್ಟಿನಿಂದ ಇಟ್ಟಿದೆ.
ಕರ್ನಾಟಕದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಬಿಜೆಪಿ ಗೆಲ್ಲಲಿಲ್ಲ. ನಾವು 136 ಸ್ಥಾನ ಗೆದ್ದಿದ್ದೇವೆ. ನೀವು ಯಾರನ್ನಾದರೂ ಒಗ್ಗೂಡಿಸಿಕೊಳ್ಳಿ ನಾವು ಕರ್ನಾಟಕದಲ್ಲಿ ಗೆದ್ದೇ ಗೆಲ್ಲುತ್ತೇವೆ. ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕಾಂಗ್ರೆಸ್ ನಿಂದ ದೂರವಾದವರು ಹತ್ತಿರವಾಗುತ್ತಿದ್ದಾರೆ. ಜನತಾದಳದ ಶಕ್ತಿ ಕುಂದಿದೆ. ಅವರ ಕುಟುಂಬದ ಸದಸ್ಯರನ್ನೇ ಬೇರೆ ಪಕ್ಷದಿಂದ ನಿಲ್ಲಿಸಿದ್ದಾರೆ.

ಕಾಂಗ್ರೆಸ್ ಜಾತಿ ಗಣತಿ ಬೇಕು ಎನ್ನುತ್ತದೆ ಆದರೆ ನೀವು ವಿರೋಧ ಮಾಡುತ್ತಿದ್ದೀರಿ ಎಂದು ಕೇಳಿದಾಗ “ಪ್ರತಿ ಮನೆಗೂ ತೆರಳಿ ಜಾತಿ ಸಮೀಕ್ಷೆ ಮಾಡಬೇಕು. ಈ ಮೊದಲು ಒಂದಷ್ಟು ತಪ್ಪುಗಳು ನಡೆದಿವೆ. ಕೇವಲ ಸ್ಯಾಂಪಲ್ ಸರ್ವೇ ನಡೆಸಲು ಆಗುವುದಿಲ್ಲ” ಎಂದರು.
ಅನೇಕ ಸಮೀಕ್ಷೆ ಪ್ರಕಾರ ಎನ್ ಡಿಎ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲವೇ ಎಂದು ಕೇಳಿದಾಗ “ಬೇರೆ ಸರ್ವೇಗಳನ್ನು ನಾನು ನಂಬುವುದಿಲ್ಲ. ನಾನು ವೈಯಕ್ತಿಕವಾಗಿ ಸಮೀಕ್ಷೆ ಮಾಡಿಸಿದರೆ ಒಂದೊಂದು ಕ್ಷೇತ್ರದಲ್ಲಿ 50 ರಿಂದ 1 ಲಕ್ಷ ಜನರ ಸಮೀಕ್ಷೆ ಮಾಡಿಸುತ್ತೇನೆ. ಸಮೀಕ್ಷೆ ಮಾಡುವವರು ಒಂದು ಊರಿಗೆ ತೆರಳಿ ನಾಲ್ಕೈದು ಜನರನ್ನು ಮಾತನಾಡಿಸಿ ಬರುತ್ತಾರೆ. ನನಗೆ ನನ್ನ ರಾಜಕೀಯ ಅನುಭವದ ಮೇಲೆ ನಂಬಿಕೆ ಇದೆ. ನನ್ನ ಜನರನ್ನು ನೋಡಿದರೆ ತಿಳಿಯುತ್ತದೆ ಎನ್ ಡಿಎ ಅಧಿಕಾರಕ್ಕೆ ಬರುವುದಿಲ್ಲ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ” ಎಂದು ತಿಳಿಸಿದರು.
ನಮ್ಮದು ಸಾಮೂಹಿಕ ನಾಯಕತ್ವ
ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂದು ಕೇಳಿದಾಗ “ಸಾಮೂಹಿಕ ನಾಯಕತ್ವದ ಮೇಲೆ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಚುನಾವಣೆ ಮುಗಿದ ನಂತರ ಎಲ್ಲಾ ನಾಯಕರು ಚರ್ಚೆ ನಡೆಸಿ ಪ್ರಧಾನಿ ಆಯ್ಕೆ ಮಾಡುತ್ತಾರೆ” ಎಂದು ಹೇಳಿದರು.
ಲೋಕಸಭಾ ಚುನಾವಣೆ ಬಳಿಕ ನಿಮ್ಮ ಹುದ್ದೆ ಬದಲಾಗಲಿದೆಯೇ ಎಂದಾಗ “ನನ್ನ ಹುದ್ದೆ ಬದಲಾವಣೆ ಮಾಡಲು ನಿಮಗೆ ತುಂಬಾ ಇಷ್ಟವೇ? ಈ ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡುವುದು ಬೇಡ ಖಾಸಗಿಯಾಗಿ ಮಾತನಾಡೋಣ. ಹೈಕಮಾಂಡ್ ತೀರ್ಮಾನದ ಬಗ್ಗೆ ನಿಮಗೆ ಹೇಳುವುದಿಲ್ಲ” ಎಂದರು.
ನಾನು ನನ್ನ ದೇವರು ಅಷ್ಟೇ
ಕಲಬುರ್ಗಿ ದತ್ತಾತ್ತೇಯ ಪೀಠದಲ್ಲಿ ನೀವು ಬೇಡಿಕೊಳ್ಳುವಾಗ ಮತ್ತೆ ಸಿಎಂ ಆಗಿ ಬರುತ್ತೇನೆ ಎನ್ನುವ ಮಾತು ಕೇಳಿಸಿತ್ತು ಎಂದಾಗ “ಭಕ್ತ ಮತ್ತು ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ ದೇವಾಲಯ. ನಾನು ಏನೂ ಬೇಡಿಕೊಂಡಿದ್ದೇನೆ, ದೇವರು ಏನು ಆಶೀರ್ವಾದ ಮಾಡಿದ್ದಾನೆ ಎನ್ನುವುದು ನಿಮಗೆ ಹೇಗೆ ತಿಳಿಯುತ್ತದೆ. ನಾನು ಮಧ್ಯವರ್ತಿಗಳನ್ನು ಇಟ್ಟುಕೊಳ್ಳುವುದಿಲ್ಲ, ಎಂದಿಗೂ ನೇರ, ನಾನು ಮತ್ತು ನನ್ನ ದೇವರು ಅಷ್ಟೇ” ಎಂದರು.
ದೇಶದಲ್ಲೇ ಅತ್ಯಂತ ಗಟ್ಟಿ ಸರ್ಕಾರ
ಲೋಕಸಭೆ ಚುನಾವಣೆ ಬಳಿಕೆ ಕಾಂಗ್ರೆಸ್ ಸರ್ಕಾರ ಬೀಳಲಿದೆ, ಬದಲಾವಣೆ ಆಗಲಿದೆ ಎಂದು ವಿಜಯೇಂದ್ರ, ಕುಮಾರಸ್ವಾಮಿ ಹೇಳುತ್ತಿದ್ದಾರೆ ಎಂದಾಗ “ನಮ್ಮ ಹಳ್ಳಿಯಲ್ಲಿ ಮಡಕೆ ಮಾಡುತ್ತಾರೆ, ಅದು ಸಹ ಒಡೆದು ಹೋಗುವುದಿಲ್ಲ. ಅದಕ್ಕಿಂತ ಶಕ್ತಿ ಕಾಂಗ್ರೆಸ್ ಸರ್ಕಾರಕ್ಕಿದೆ. ಇಡೀ ದೇಶದಲ್ಲೇ ಅತ್ಯಂತ ಗಟ್ಟಿ ಹಾಗೂ ಸಬಲವಾದ ಸರ್ಕಾರ ಕರ್ನಾಟಕ ಕಾಂಗ್ರೆಸ್ ಸರ್ಕಾರ. ಯಾವ ಬದಲಾವಣೆಯೂ ಆಗುವುದಿಲ್ಲ” ಎಂದರು.
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು, ಮಹದಾಯಿ ಜಾರಿಗೆ ಬರುತ್ತದೆಯೇ ಎಂದು ಕೇಳಿದಾಗ “ಅವರ ಹಣದಲ್ಲಿ ಅವರ ಜಾಗದಲ್ಲಿ ಅಣೆಕಟ್ಟು ಕಟ್ಟುತ್ತಾರೆ. ನಿಮ್ಮ ಪಾಲಿನ ನೀರು ನಿಮಗೆ ಕೊಡುತ್ತಾರೆ ಎಂದು ಕರ್ನಾಟಕ ಮಾತು ಕೊಟ್ಟಿದೆ ಎಂದು ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಹೇಳಿದೆ. ತಮಿಳುನಾಡಿನವರು ಸಹ ಒಂದು ಅಫಿಡವಿಟ್ ಅಲ್ಲಿ ಅವರ ಜಾಗದಲ್ಲಿ ಕಟ್ಟಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ಅವರ ರಾಜ್ಯದ ಹಿತಾಸಕ್ತಿ ಬಗ್ಗೆ ಕಾಳಜಿವಹಿಸುವುದು ಸಹಜ. ಮೇಕೆದಾಟುವಿನಿಂದ ತಮಿಳುನಾಡಿಗೆ ಹೆಚ್ಚು ಉಪಯೋಗ. ಅವರ ನೀರನ್ನು ನಾವು ಹಿಡಿದಿಟ್ಟುಕೊಳ್ಳುವುದಿಲ್ಲ. ಇದರಿಂದ ಬರಗಾಲದಲ್ಲಿ ಉಪಯೋಗವಾಗುತ್ತದೆ, ಬೆಂಗಳೂರಿಗೆ ಕುಡಿಯುವ ನೀರಿಗೆ ಬಳಸಿಕೊಳ್ಳಬಹುದು. ಇಲ್ಲಿನ ನೀರನ್ನು ತಮಿಳುನಾಡಿಗೆ ಕೊಟ್ಟರೆ, ಕೆಆರ್ ಎಸ್ ನೀರನ್ನು ರೈತರಿಗೆ ಬಳಸಿಕೊಳ್ಳಬಹುದು. ನೀರಾವರಿ ಇಲಾಖೆ ಜವಾಬ್ದಾರಿ ತೆಗೆದುಕೊಂಡಿರುವುದೇ ಸಾಕ್ಷಿಗಳನ್ನು ಬಿಟ್ಟುಹೋಗಲು” ಎಂದರು

ನಮಗೆ ಓಟ್ ಬ್ಯಾಂಕ್ ಮುಖ್ಯವಲ್ಲ, ಬದುಕಿನ ಬ್ಯಾಂಕ್ ಮುಖ್ಯ
ಗ್ಯಾರಂಟಿ ಯೋಜನೆಗಳಿಂದ ಮತಗಳಿಕೆ ಪ್ರಮಾಣ ಹೆಚ್ಚಾಗಲಿದೆಯೇ? ಹೊಸ ಮತದಾರರನ್ನು ಹೇಗೆ ಸೆಳೆಯುತ್ತೀರಿ ಎಂದು ಕೇಳಿದಾಗ “ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಲಾಯಿತು. ಬಿಸಿಯೂಟ ಯೋಜನೆ ತರಲಾಯಿತು. ನಮಗೆ ಮತ ಗಳಿಕೆಯೊಂದೇ ಗುರಿಯಲ್ಲ. ರಾಜ್ಯದ ಜನರಿಗೆ ಒಳ್ಳೆಯದು ಆಗಬೇಕು. ಬೆಲೆಏರಿಕೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಕಷ್ಟಪಡುತ್ತಿರುವ ಮಹಿಳೆಯರಿಗೆ ಸಂಸಾರ ನಡೆಸಲು ಅನುಕೂಲವಾಗಬೇಕು. ಕಾಂಗ್ರೆಸ್ ಪಕ್ಷ ಮಹಿಳೆಯರು, ಯುವಕರು, ವಿದ್ಯಾರ್ಥಿಗಳ ಪರವಾಗಿ ಕೆಲಸ ಮಾಡಲಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆ ಮೂಲಕ 1 ಲಕ್ಷ ನೀಡುತ್ತಿದ್ದೇವೆ. ನಮಗೆ ಓಟ್ ಬ್ಯಾಂಕ್ ಮುಖ್ಯವಲ್ಲ, ಬದುಕಿನ ಬ್ಯಾಂಕ್ ಮುಖ್ಯ” ಎಂದರು.
ಮಹದಾಯಿ ಮತ್ತು ಮೇಕೆದಾಟು ಯೋಜನೆ ಜಾರಿಗಾಗಿ ನನ್ನ ಆಯ್ಕೆ ಮಾಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದಾಗ “ಕೊಟ್ಟ ಕುದುರೆಯನ್ನು ಏರಲಾರದೆ, ಇನ್ನೊಂದು ಕುದುರೆಯನ್ನು ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ” ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಮತ್ತು ನಿಮ್ಮ ಮಧ್ಯೆ ಸಂಪತ್ತಿನ ಸವಾಲ್ ರಾಜ್ಯದ ಜನರಿಗೆ ಯಾವ ಸಂದೇಶ ನೀಡುತ್ತಿದೆ ಎಂದು ಕೇಳಿದಾಗ “ಅವರ ಚಿಲ್ಲರೇ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲು ಆಗುವುದಿಲ್ಲ. ಬೇರೆ ವೇದಿಕೆಯಲ್ಲಿ ಉತ್ತರ ನೀಡುತ್ತೇನೆ” ಎಂದರು.

More News

You cannot copy content of this page