DK SURESH FANS: ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತಿ ಡಿ.ಕೆ. ಸುರೇಶ್ ಗೆಲುವಿಗೆ ಪ್ರಾರ್ಥಿಸಿದ ಅಭಿಮಾನಿಗಳು

ಮೈಸೂರು, ಏ.18: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ಗೆಲುವು ಸಾಧಿಸಲಿ ಎಂದು ಅವರ ಅಭಿಮಾನಿಗಳು ಚಾಮುಂಡೇಶ್ವರಿ ಬೆಟ್ಟದ ಮೆಟ್ಟಿಲು ಹತ್ತಿ ಪ್ರಾರ್ಥನೆ ಸಲ್ಲಿಸಿದರು.

ಡಿ.ಕೆ. ಬ್ರದರ್ಸ್ ಅಭಿಮಾನಿ ಬಳಗದ ಸುಮಾರು 300 ಸದಸ್ಯರು ಗುರುವಾರ ಬೆಳಗ್ಗೆ ಮೈಸೂರಿನಲ್ಲಿ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದರು. ಆಮೂಲಕ ಡಿ.ಕೆ ಸುರೇಶ್ ಅವರು ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಬೇಕು, ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಬೇಕು ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಪಾದಯಾತ್ರಿಗಳು. “ಡಿ.ಕೆ ಸುರೇಶ್ ಅವರು ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗಬೇಕು ಎಂದು ಸಣ್ಣ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ಹರಕೆ ಹೊತ್ತು ಬಂದಿದ್ದೇವೆ. ನಮ್ಮಂತಹ ಗದ್ದೆ, ಹೊಲ ಇಲ್ಲದವರಿಗೆ ಪ್ರತಿ ತಿಂಗಳು ಕಾಂಗ್ರೆಸ್ ಸರ್ಕಾರ 2 ಸಾವಿರ ನೀಡುತ್ತಿದೆ. ಜತೆಗೆ ಅನ್ನಭಾಗ್ಯ ಯೋಜನೆ ಮೂಲಕ ಅಕ್ಕಿ ನೀಡುತ್ತಿದ್ದಾರೆ. ಇದರಿಂದ ನಮ್ಮ ಸಂಸಾರವನ್ನು ನಡೆಸಲು ಸಹಾಯವಾಗುತ್ತಿದೆ. ಸರ್ಕಾರದ ಈ ಯೋಜನೆಗಳು ನಮಗೆ ಅನುಕೂಲವಾಗಿವೆ. ಈ ಯೋಜನೆಗಳಿಂದ ರಾಜ್ಯಕ್ಕೆ ಯಾವುದೇ ತೊಂದರೆ ಇಲ್ಲ. ಬಿಜೆಪಿ ನಮ್ಮಂತಹ ಬಡವರಿಗಾಗಿ ಏನು ಮಾಡಿದೆ?

ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಶಕ್ತಿ ತುಂಬುವಂತಹ ಕಾರ್ಯಕ್ರಮವನ್ನು ನೀಡಿದ್ದಾರೆ. ನಾವು ಗಂಡದಿರು, ಮಕ್ಕಳ ಬಳಿ ಹಣ ಕೇಳುವ ಪರಿಸ್ಥಿತಿಯನ್ನು ನೀಡದೇ ನಮಗೆ ಅವರು ಹಣ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಉಚಿತ ಬಸ್ ವ್ಯವಸ್ಥೆ, 2 ಸಾವಿರ ಹಣ, ಉಚಿತ ವಿದ್ಯುತ್ ಸೌಕರ್ಯ, ಅನ್ನಭಾಗ್ಯ ಯೋಜನೆ ಎಲ್ಲವನ್ನು ಜಾರಿ ಮಾಡಿದ್ದಾರೆ. ಆಮೂಲಕ ನುಡಿದಂತೆ ನಡೆದುಕೊಂಡಿದ್ದಾರೆ. ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಮಗೆ ಇನ್ನು ಹೆಚ್ಚಿನ ಸಿಗುವ ಭರವಸೆಯಿದೆ. ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು ಎಂದು ನಾವು ಮನವಿ ಮಾಡುತ್ತೇವೆ” ಎಂದರು.

More News

You cannot copy content of this page