ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಬರ್ಬರ ಹತ್ಯೆ

ಗದಗ: ಮಲಗಿದಲ್ಲೇ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆಯಾದ ಘಟನೆ ನಗರದ ದಾಸರ ಓಣಿಯಲ್ಲಿ ನಡೆದಿದೆ.
ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ಕು ಜನರ ಕೊಲೆಯಾಗಿದ್ದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರು.
ಮೊದಲನೇ ಮಹಡಿಯ ಕೊಣೆಯಲ್ಲಿ ಮಲಗಿದ್ದ ಪತಿ, ಪತ್ನಿ, ಮಗಳ ಕೊಲೆಯಾಗಿದ್ದು, ಈ ಮೂವರು ಕೊಪ್ಪಳ ಮೂಲದವರು ಎಂದು ತಿಳಿದು ಬಂದಿದೆ.

ಏಪ್ರಿಲ್‌ 17 ರಂದು ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್ ನ ಮದುವೆ ಫಿಕ್ಸ್ ಕಾರ್ಯಕ್ರಮಕ್ಕಾಗಿ ಆಗಮಿಸಿದ ಸಂಬಂಧಿಗಳಿವರು ಎನ್ನಲಾಗಿದ್ದು, ಬಾಗಿಲು ಸದ್ದು ಕೇಳಿ ಅನುಮಾನಗೊಂಡು ಕುಟುಂಬಸ್ಥರು‌ ಪೊಲೀಸರಿಗೆ ಫೋನ್ ಮಾಡಿದ್ದರು. ಪೊಲೀಸರಿಗೆ ಫೋನ್ ಮಾಡ್ತಾಯಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಾಗಿಲು ತೆಗೆದಿದ್ರೆ ನಮ್ಮನ್ನು ಕೊಲೆ ಮಾಡುತ್ತಿದ್ದರು ಎಂದು ಮನೆ ಮಾಲೀಕ‌ ಪ್ರಕಾಶ್ ಬಾಕಳೆ ಹೇಳಿಕೆ ನೀಡಿದ್ದಾರೆ.
ಸ್ಥಳಕ್ಕೆ ಎಸ್ಪಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಎಸ್ಪಿ ಎಂ.ಬಿ. ಸಂಕದ, ಡಿವೈಎಸ್ಪಿ, ಸಿಪಿಐ ಸೇರಿ ಹಲವು ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸುತ್ತಿದ್ದು, ಶ್ವಾನದಳ, ಫಾರಿನ್ ಸಿಕ್ ತಂಡಗಳಿಂದ ಇಂಚಿಂಚು ಪರಿಶೀಲನೆ ನಡೆಸಲಾಗುತ್ತಿದೆ.
ಎಸ್ಪಿ ಬಿ.ಎಸ್. ನೇಮಗೌಡ ಪ್ರತಿಕ್ರಿಯೆ: ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಎಸ್‌ಪಿ ಬಿ.‌ಎಸ್. ನೇಮಗೌಡ ಪ್ರತಿಕ್ರಿಯಿಸಿದ್ದು, ಮಧ್ಯರಾತ್ರಿ ನಾಲ್ಕು ಜನರಾದ ಪ್ರಕಾಶ ಬಾಕಳೆ ಮಗ ಕಾರ್ತಿಕ್, ಸಂಬಂಧಿಕರಾದ ಪರಶುರಾಮ್, ಲಕ್ಷ್ಮೀ, ಆಕಾಂಕ್ಷಾ ಹತ್ಯೆ ಆಗಿದೆ.

ಕುಟುಂಬಸ್ಥರು ಹೇಳುವ ಪ್ರಕಾರ ರಾತ್ರಿ 2 ರಿಂದ 3 ಗಂಟೆ ಆಗಿದೆ ಎನ್ನಲಾಗಿದ್ದು, ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವುದು ಕಂಡು ಬರುತ್ತಿದೆ. ಯಾರು ಎಂಬುದು ಗೊತ್ತಾಗಿಲ್ಲ. ಪರಿಶೀಲನೆ ಮುಂದುವರೆದಿದೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿ, ಆದಷ್ಟು ಬೇಗ ದಸ್ತಗಿರಿ ಮಾಡುತ್ತೇವೆ. ಕುಟುಂಬಸ್ಥರು ಹೇಳುವ ಪ್ರಕಾರ ರಾತ್ರಿ ಬಾಗಿಲು ಬಡೆದರೂ ತೆಗೆದಿಲ್ಲ. ಆದರೆ ಹೊರಗಡೆ ಬಂದು ನೋಡಿದಾಗ 2 ರೂಮ್ ನಲ್ಲಿ ಹತ್ಯೆ ಆಗಿತ್ತು.ಈ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಟೆರೇಸ್ ನಿಂದ ಬಂದಿದ್ದಾರೆ ಎನ್ನಲಾಗುತ್ತಿದ್ದು, ಪರಿಶೀಲನೆ ಮಾಡುತ್ತಿದ್ದೇವೆ ಎಂದರು.

ಘಟನಾ ಸ್ಥಳಕ್ಕೆ ಸಚಿವ ಎಚ್.ಕೆ ಪಾಟೀಲ ಭೇಟಿ: ಘಟನಾ ಸ್ಥಳಕ್ಕೆ ಗದಗ ಜಿಲ್ಲಾ ಉಸ್ತುವಾರಿ, ಕಾನೂನು, ನ್ಯಾಯ, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ ಭೇಟಿ ನೀಡಿದ್ದಾರೆ.
ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸಚಿವರ ಮುಂದೆ ಅಳಲು ತೋಡಿಕೊಂಡ ಕುಟುಂಬಸ್ಥರು, ಆರೋಪಿಗಳನ್ನು ಬೇಗ ಪತ್ತೆ ಹಚ್ಚುವಂತೆ ಎಸ್.ಪಿ ಅವರಿಗೆ ಹೇಳಿ ಎಂದು ಕುಟುಂಬಸ್ಥರು ಮನವಿ ಮಾಡಿದರು.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

More News

You cannot copy content of this page