ಧಾರವಾಡ: ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದ್ದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಇದೀಗ ಲೋಕ ಸಮರದ ಕಣದಿಂದ ಹಿಂದೆ ಸರಿದಿದ್ದಾರೆ.
ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರ ವಿರುದ್ಧ ತೊಡೆ ತಟ್ಟಿ ಅನೇಕ ಕಡೆಗಳಲ್ಲಿ ಭಕ್ತರ ಸಭೆ ನಡೆಸಿದ್ದ ದಿಂಗಾಲೇಶ್ವರ ಸ್ವಾಮೀಜಿ, ಧಾರವಾಡದ ಟೌನ್ ಹಾಲ್‌ನಿಂದ ಮೆರವಣಿಗೆ ಮೂಲಕ ಬಂದು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.
ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಇದು ಧರ್ಮ ಯುದ್ಧ ಎಂದು ಹೇಳಿದ್ದ ಸ್ವಾಮೀಜಿ, ಸೋಮವಾರ ತಮ್ಮ ಸೂಚಕರಾಗಿದ್ದ ಸಚಿನ್ ಪಾಟೀಲ ಹಾಗೂ ಅಮೃತ ಬಳ್ಳೋಳ್ಳಿ ಅವರನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿ ಅವರ ಮೂಲಕ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಇದರಿಂದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರು ಪ್ರಭಾವಿಗಳ ಮಧ್ಯೆಯೇ ಇದೀಗ ಸ್ಪರ್ಧೆ ಏರ್ಪಟ್ಟಂತಾಗಿದೆ.
ದಿಂಗಾಲೇಶ್ವರ ಶ್ರೀಗಳು ತಮ್ಮ ನಾಮಪತ್ರ ವಾಪಸ್ ಪಡೆಯಲು ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬಂದರೂ ಸ್ವತಃ ತಾವೇ ಬಂದು ನಾಮಪತ್ರ ವಾಪಸ್ ಪಡೆಯದೇ ಸೂಚಕರನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿ ಅವರ ಮೂಲಕ ತಮ್ಮ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ