ಬೆಂಗಳೂರು (ಏಪ್ರಿಲ್ 22):- ರಾಷ್ಟ್ರಮಟ್ಟದಲ್ಲಿ 400 ಸೀಟು ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿಯವರಿಗೆ ಪಾಪ್ಯುಲರಿಟಿ ಕಾಣಿಸುತ್ತಿಲ್ಲ. ಹೀಗಾಗಿ ಪ್ರತಿಯೊಂದು ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು.
ಸದಾಶಿವನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,
ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಇನ್ನಿತರ ಕಾರಣಗಳು ಜನರು ಅರ್ಥ ಮಾಡಿಕೊಂಡಿದ್ದಾರೆ. ಪ್ರತಿಯೊಂದು ರಾಜ್ಯದಲ್ಲಿಯೂ ಬಿಜೆಪಿಯವರ ಪಾಪ್ಯುಲರಿಟಿ ಕುಸಿದಿದೆ. ಬಿಜೆಪಿಯವರು ನಿರೀಕ್ಷಿಸಿದ ಮಟ್ಟಕ್ಕೆ ಫಲಿತಾಂಶ ಬರುವುದಿಲ್ಲ ಎಂದರು.
ಚುನಾವಣೆಯಲ್ಲಿ ಯಾವತ್ತು ಕೂಡ ಒಬ್ಬರನ್ನೊಬ್ಬರು ಪರಸ್ಪರ ದ್ವೇಷ ಮಾಡುವಂತಹದ್ದು ನೋಡಿರಲಿಲ್ಲ. ಪ್ರಧಾನಮಂತ್ರಿಯವರು ಸೇರಿದಂತೆ ಯಾವುದೇ ಪಕ್ಷದವರು ಧರ್ಮದ ಆಧಾರದ ಮೇಲೆ ಮಾತನಾಡುವುದನ್ನು ನೋಡಿರಲಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಚುನಾವಣೆಯಲ್ಲಿ ಜನರು ಯಾವ ರೀತಿಯ ಪ್ರತಿಕ್ರಿಯೆ ಮಾಡುತ್ತಾರೆ ಎಂಬುದನ್ನು ನೋಡಬೇಕು ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ನೇಹಾಗಾಗಿ ವೋಟ್ ಹಾಕಿ ಅಂತ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿರುವ ಅರ್ಥ ಕಾಣಿಸುತ್ತಿದೆ. ಈ ಬಗ್ಗೆ ಹೆಚ್ಚಹ ಪ್ರತಿಕ್ರಿಯೆ ಮಾಡಲು ಹೋಗುವುದಿಲ್ಲ. ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಯಾವುದೇ ಧರ್ಮ, ಜಾತಿಗೆ ಸೇರಿದ್ದರು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವುದಾಗಿ ಈಗಾಗಲೇ ಹೇಳಿದ್ದೇನೆ. ಕಾನೂನು ಬಿಟ್ಟು ಕೆಲಸ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.
ಆರೋಪಿತ ಮುಸ್ಲಿಂ ಆಗಿರುವುದರಿಂದ ಸರ್ಕಾರ ಮೃದು ಧೋರಣೆ ತೋರುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಸರ್ಕಾರಕ್ಕೆ ಅಂತವರ ರಕ್ಷಣೆ ಮಾಡುವ ಅವಶ್ಯಕತೆ ಏನಿದೆ? ಕೊಲೆ ಮಾಡಿರುವ ವ್ಯಕ್ತಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಆಗುತ್ತದೆ. ಇದೇ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಈ ಹಿಂದೆ ಸಿಬಿಐಗೆ ಅನೇಕ ಪ್ರಕರಣಗಳನ್ನು ಕೊಡಲಾಗಿದೆ. ಪ್ರಕರಣದ ತನಿಖೆ ನಡೆಸಲು ನಮ್ಮವರಿಂದ ಆಗಲಿಲ್ಲ ಎಂದರೆ ಸಿಬಿಐ ವಹಿಸಲಾಗುತ್ತಿತ್ತು. ಘಟನೆ ನಡೆದ ಗಂಟೆಯೊಳಗೆ ಆರೋಪಿಯನ್ನು ಹಿಡಿಯಲಾಗಿದೆ ಎಂದರು.