Search

HD Kumaraswamy: ಕೇಂದ್ರದ ವಿಷಯ ಹಾಗಿರಲಿ, ಜನರಿಗೆ ಇವರೆಷ್ಟು ಪರಿಹಾರ ಕೊಟ್ಟಿದ್ದಾರೆ? ಸರ್ಕಾರಕ್ಕೆ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು: ಬರ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆಯ ಬಗ್ಗೆ ಕೇಂದ್ರದ ಕಡೆ ಕೈ ತೋರಿಸುವ ಕಾಂಗ್ರೆಸ್ ಸರಕಾರ ಬರದಿಂದ ನೊಂದಿರುವ ಜನರಿಗೆ ಏನು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಾಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ತಮ್ಮನ್ನು ಭೇಟಿ ಮಾಡಿದ್ದ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು; ಕೇಂದ್ರ ಸರಕಾರ ₹3,454 ಕೋಟಿ ಪರಿಹಾರ ನೀಡಿದೆ. ಕಡಿಮೆ ಬಂದಿದೆ ಎಂದರೆ ಕೇಳಲಿ, ಅದು ಬಿಟ್ಟು ರಾಜಕೀಯ ಮಾಡಿಕೊಂಡಿದ್ದರೆ ಉಪಯೋಗವೇನು? ಎಂದರು.

ಹಣ ಬಿಡುಗಡೆ ಮಾಡುವಾಗ ಎಲ್ಲಾ ಅಂಶಗಳನ್ನು ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಂಡಿರುತ್ತದೆ. ಹಣ ಸಾಕಾಗಲಿಲ್ಲ ಎಂದರೆ ಇವರು ಕೇಳಿದಷ್ಟು ಹಣ ಕೊಡಲು ಸಾಧ್ಯವೇ? ಒಕ್ಕೂಟ ವ್ಯವಸ್ಥೆ ಎನ್ನುವುದು ಇದೆಯಲ್ಲ. 15ನೇ ಹಣಕಾಸಿನ ಆಯೋಗದ ಶಿಫಾರಸಿನ ಹಿನ್ನಲೆಯಲ್ಲಿ ಹಣ ಬರುತ್ತದೆ. ರಾಜ್ಯದಲ್ಲಿ ತೀವ್ರ ಬರವಿದೆ, ಅದಕ್ಕೆ ರಾಜ್ಯ ಸರ್ಕಾರ ಏನು ಮಾಡಿದೆ? ₹2000 ಕೊಡುತ್ತೇವೆ ಎಂದರು, ಯಾರಿಗೆ ಹೋಗಿದೆ? ಎಷ್ಟು ಜನಕ್ಕೆ ಹಣ ತಲುಪಿದೆ? ಆ ₹2000ದಲ್ಲಿ ಕೇಂದ್ರ ಸರಕಾರದ ಹಣ ಸೇರಿದೆ. ಅದನ್ನು ಈ ಸರ್ಕಾರ ಹೇಳಬೇಕಲ್ಲವೇ? ಎಂದು ಹೇಳಿದರು ಕುಮಾರಸ್ವಾಮಿ ಅವರು.

ಇವರು ರಾಜ್ಯ ಬರ ಪರಿಹಾರ ನಿಧಿ )SDRF) ಯಿಂದ ಎಷ್ಟು ಹಣ ಕೊಟ್ಟಿದ್ದಾರೆ? ಮಂಡ್ಯ ಜನರು ನನಗೆ ಹೇಳಿದರು, ಸರ್ಕಾರದಿಂದ ಒಂದು ರೂಪಾಯಿ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ರೈತರು ₹2000 ಬಂದಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಬರ ನಿರ್ವಹಣೆಯಲ್ಲಿ ಇವರು ಸಂಪೂರ್ಣ ವಿಫಲರಾಗಿದ್ದಾರೆ. ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ಇವರು ಸದಾ ಕೇಂದ್ರ ಸರಕಾರದ ಮೇಲೆ ಮೇಲೆ ಟೀಕೆ ಮಾಡುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.

ಇವರನ್ನು ತೃಪ್ತಿಪಡಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಿಲ್ಲ. ಕೆಲವೊಂದು ಮಾರ್ಗದರ್ಶನದ ಮೇಲೆ ಅನುಧಾನ ಬಿಡುಗಡೆ ಮಾಡ್ತಾರೆ ಎಂದರು ಅವರು.

ಪ್ರಚಾರಕ್ಕೆ ತೆರಳುತ್ತೇನೆ

ಕಲಬುರಗಿ, ರಾಯಚೂರು, ಹೊಸಪೇಟೆ, ಶಿವಮೊಗ್ಗ ಲೋಕಸಭೆ ಕ್ಷೇತ್ರಗಳ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ. ನಾಳೆ ಹೊಸಪೇಟೆಗೆ ಹೋಗುತ್ತಿದ್ದೇನೆ. ಎರಡನೇ ಹಂತದ ಚುನಾವಣೆಗೆ ಎಲ್ಲೆಲ್ಲಿ ಅವಶ್ಯಕತೆ ಇದ್ಯೋ ಅಲ್ಲಿಗೆ ಹೋಗುತ್ತೇನೆ. ನನ್ನ ಅಭಿಪ್ರಾಯದ ಪ್ರಕಾರ NDA 14 ಕ್ಷೇತ್ರಗಳಲ್ಲಿ 12 ರಿಂದ 13 ಸ್ಥಾನ ಗೆಲ್ಲುತ್ತದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಮಂಡ್ಯದಲ್ಲಿ 81%ಕ್ಕೂ ಹೆಚ್ಚು ಮತದಾನ ಆಗಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆದ 14 ಕ್ಷೇತ್ರಗಳಲ್ಲಿ ಮಂಡ್ಯದಲ್ಲಿ ಅತಿ ಹೆಚ್ಚು ಮತದಾನ ಆಗಿದೆ. ಹೀಗಾಗಿ ನನ್ನ ಗೆಲುವಿನ ಅಂತರ ಹೆಚ್ಚಾಗಿರುತ್ತದೆ ಎಂದರು ಅವರು.

More News

You cannot copy content of this page