Search

PM MODI IN BAGALKOT: ಇದು ಹೊಸ ಭಾರತ, ಎಚ್ಚರಿಕೆ ಇರಲಿ- ಮೋದಿ

ಬಾಗಲಕೋಟೆ: ಬಾಗಲಕೋಟೆಯಲ್ಲಿ ಬಿಜೆಪಿ ಪ್ರಚಾರಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಬಾಲ್ ಕೋಟ್ ವೈಮಾನಿಕ ದಾಳಿಯ ಪ್ರಸ್ತಾಪ ಮಾಡಿದ್ದಾರೆ.
ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ಸಭೆ ನಡೆಸಿರುವ ಮೋದಿ, ಚುನಾವಣಾ ಪ್ರಚಾರದಲ್ಲಿ ಮೊದಲ ಬಾರಿಗೆ ಸ್ಥಳೀಯ ಸಮಸ್ಯೆಗಳ ಜೊತೆ ಜೊತೆಗೆ ಭಾರತದ ಭದ್ರತೆಯ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ಬಾಲ್‌ಕೋಟ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದಾಗ ಕೆಲವರು ಸ್ಥಳದ ಹೆಸರನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರು ಎಂದು ಪ್ರಧಾನಿ ನುಡಿದರು
ದೇಶದ ಭದ್ರತೆಯ ವಿಚಾರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ರಾಜೀ ಮಾಡುವುದಿಲ್ಲ ಎಂದು ಮೋದಿ ಘೋಷಿಸಿದರು.

ಇದು ಬದಲಾದ ಭಾರತ ಎಂಬುದು ಎಲ್ಲರಿಗೂ ನೆನಪಿರಲಿ. ದೇಶದ ನಾಗರಿಕರ ಹತ್ಯೆ ನಡೆಸಿದರೆ ಉಗ್ರರ ನೆಲೆಗಳಿಗೆ ನುಗ್ಗಿ ಹೊಡೆಯುತ್ತೇವೆ ಎಂದು ಪ್ರಧಾನಿ ಮೋದಿ ಘೋಷಿಸಿದರು
ಇದೇ ಮೊದಲ ಬಾರಿಗೆ ಪಾಕ್ ಬೆಂಬಲಿತ ಉಗ್ರರಿಗೆ ಕರುನಾಡ ಮಣ್ಣಿನಲ್ಲಿ ನಿಂತು ಪ್ರಧಾನಿ ಮೋದಿ ಸಂದೇಶ ರವಾನಿಸಿದರು. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿರಿಸಿ ನಡೆಸಿದ ವೈಮಾನಿಕ ದಾಳಿ ಬಗ್ಗೆ ಕೂಡ ಮೋದಿ ಚುನಾವಣೆಯಲ್ಲಿ ಪ್ರಸ್ತಾಪ ಮಾಡಿದರು.
ರಾಷ್ಟ್ರೀಯ ವಿಚಾರಗಳು ಜೊತೆ ಜೊತೆಗೆ ಸ್ಥಳೀಯ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಪ್ರಧಾನಿ ಮೋದಿ ಮತದಾರರ ಮನಗೆಲ್ಲುವ ಪ್ರಯತ್ನ ನಡೆಸಿದರು. ಕಳೆದ ಎರಡು ತಿಂಗಳ ಅವಧಿಯಲ್ಲಿ ಕರ್ನಾಟಕದಲ್ಲಿ ನಡೆದ ಪ್ರತಿಯೊಂದು ಘಟನೆಯನ್ನು ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟ ಪ್ರಸ್ತಾಪಿಸಿದ ಮೋದಿ, ರಾಜ್ಯ ಸರ್ಕಾರದ ಮನೋಸ್ಥಿತಿಯನ್ನು ಪ್ರಶ್ನಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಲ್ಪ ಸಂಖ್ಯಾತರ ತುಷ್ಟೀಕರಣದಲ್ಲಿ ನಿರತವಾಗಿದೆ ಎಂದು ಟೀಕಿಸಿದರು. ಆರಂಭದಲ್ಲಿ ಸಿಲಿಂಡರ್ ಸ್ಫೋಟ ಎಂದು ಹೇಳಿ ಪ್ರಕರಣದ ತೀವ್ರತೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಯತ್ನನಡೆಸಿತ್ತು. ಅಂತಿಮವಾಗಿ ರಾಷ್ಟ್ರೀಯ ತನಿಖಾದಳ ಆರೋಪಿಗಳನ್ನು ಬಂಧಿಸುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ ಎಂದು ಹೇಳಿದರು
ಇದರ ಜೊತೆಗೆ ಬೆಂಗಳೂರಿನ ನಗರ್ತಪೇಟೆಯಲ್ಲಿ ನಡೆದ ಹನುಮಾನ್ ಚಾಲೀಸಾ ವಿಚಾರವನ್ನು ಕೂಡ ಮೋದಿ ತಮ್ಮ ಭಾಷಣದಲ್ಲಿ ಪ್ರಮುಖವಾಗಿ ಹೇಳಿದರು. ಭಜನೆ ಕೇಳಲು ರಾಜ್ಯದಲ್ಲಿ ಅವಕಾಶ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಪರೋಕ್ಷವಾಗಿ ಸೂಚಿಸಿದರು. ಎಲ್ಲದಕ್ಕಿಂತ ಮುಖ್ಯವಾಗಿ ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣವನ್ನು ಮೋದಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಹೆಣ್ಣು ಮಗಳೊಬ್ಬಳನ್ನು ಹಲವು ಬಾರಿ ಚುಚ್ಚಿ ಕೊಲೆ ಮಾಡಲಾಗಿದೆ. ಎಂದು ಬಹಿರಂಗವಾಗಿ ಹೇಳುವ ಮೂಲಕ ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಯಾವ ಹಂತ ತಲುಪಿದೆ ಎಂದು ಹೇಳುವ ಪ್ರಯತ್ನ ನಡೆಸಿದರು.

ರಾಜಧಾನಿ ಬೆಂಗಳೂರಿನಲ್ಲಿ ತೀವ್ರವಾಗಿರುವ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಕೂಡ ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಲೂಟಿ ಮಾಡುವುದರಲ್ಲಿ ನಿರತವಾಗಿದೆ ಎಂದು ಆರೋಪಿಸಿದರು. ಜನರಿಗೆ ಕಾಂಗ್ರೆಸ್ ವಂಚನೆ ಮಾಡುತ್ತಿದೆ. ಬೆಂಗಳೂರು ವಾಟರ್ ಮಾಫಿಯಾದ ಹಿಡಿತಕ್ಕೆ ಸಿಲುಕಿ ನಲುಗುತ್ತಿದೆ ಎಂದು ಪ್ರಧಾನಿ ಆತಂಕ ವ್ಯಕ್ತಪಡಿಸಿದರು.
ಎರಡನೆ ಹಂತದ ಲೋಕ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿರುಸಿನ ಪ್ರಚಾರ ಕೈಗೊಂಡ ಪ್ರಧಾನಿ ಎರಡು ದಿನಗಳಲ್ಲಿ ಐದು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸಲಿದೆ ಎಂಬ ವಿಶ್ವಾಸವನ್ನು ಮೋದಿ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

More News

You cannot copy content of this page