ಚಿಕ್ಕೋಡಿ: ರಾಜ್ಯದಲ್ಲಿ ಎರಡನೆ ಹಂತದ ಲೋಕಸಭೆಯ ಚುನಾವಣಾ ಪ್ರಚಾರ ಮುಗಿಲು ಮುಟ್ಟಿದೆ. ಇದೇ ವೇಳೆ ಆರೋಪ- ಪ್ರತ್ಯಾರೋಪ ಕೂಡ ಬಿರುಸುಪಡೆದುಕೊಂಡಿದೆ. ಮಾತಿನ ಭರದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ಸತ್ತು ಹೋದರೆ ಎಂಬ ಹೇಳಿಕೆಯನ್ನು ಶಾಸಕ ರಾಜು ಕಾಗೆ ನೀಡಿದ್ದಾರೆ. ಚಿಕ್ಕೋಡಿಯಲ್ಲಿ ನಡೆದ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ಮೋದಿ ಸತ್ತು ಹೋದರೆ ಪ್ರಧಾನಿ ಸ್ಥಾನ ಅಲಂಕರಿಸುವ ಯಾವುದೇ ವ್ಯಕ್ತಿ ಈ ದೇಶದಲ್ಲಿ ಇಲ್ಲವೇ ಎಂಬರ್ಥದ ಹೇಳಿಕೆಯನ್ನು ಶಾಸಕ ರಾಜು ಕಾಗೆ ನೀಡಿದ್ದಾರೆ. ದೇಶದ 140 ಕೋಟಿ ಜನರಲ್ಲಿ ಪ್ರಧಾನಿ ಸ್ಥಾನಕ್ಕೆ ಏರುವ ಅರ್ಹತೆ ಯಾರಿಗೂ ಇಲ್ಲವೇ ಎಂದು ರಾಜು ಕಾಗೆ ಪ್ರಶ್ನಿಸಿದ್ದಾರೆ.
ಪ್ರಧಾನಿ ಯಂತಹ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ಕುರಿತಂತೆ ರಾಜು ಕಾಗೆ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಶಾಸಕ ರಾಜು ಕಾಗೆ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಇಂತಹ ಕೀಳುಮಟ್ಟದ ಹೇಳಿಕೆ ಕಾಂಗ್ರೆಸ್ ಮನೋಸ್ಥಿತಿಯ ದ್ಯೋತಕ ಎಂದು ಬಿಜೆಪಿ ನಾಯಕರು ಖಂಡಿಸಿದ್ದಾರೆ.
ರಾಜ್ಯದ ಚುನಾವಣಾ ಪ್ರಚಾರದ ವೇಳೆ ವೈಯಕ್ತಿಕ ಟೀಕೆಗೆ ಅವಕಾಶ ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಆಯೋಗದ ಎಚ್ಚರಿಕೆಯ ಬಳಿಕವೂ ರಾಜಕಾರಣಿಗಳ ಎಲುಬಿಲ್ಲದ ನಾಲಗೆ ಅರ್ಥಹೀನ ಟೀಕೆ ಟಿಪ್ಪಣಿಯಲ್ಲಿ ನಿರತವಾಗಿದೆ
ರಾಜಕಾರಣಿಗಳು ಪರಸ್ಪರ ಗೌರವ ಕೊಟ್ಟು ಮಾತನಾಡಬೇಕು , ನೆಲದ ಸಂಸ್ಕೃತಿ ಎತ್ತಿ ಹಿಡಿಯಬೇಕು ಎಂಬುದನ್ನು ಮತದಾರರು ಬಯಸುತ್ತಿದ್ದಾರೆ. ವೋಟಿಗಾಗಿ ರಾಜಕಾರಣಿಗಳು ಇದನ್ನೆಲ್ಲ ಮರೆತು ವಾಗ್ದಾಳಿ ನಡೆಸುತ್ತಿದ್ದಾರೆ