Search

DK SHIVAKUMAR: ಪ್ರಜ್ವಲ್ ಕೈ ಹಿಡಿದು, ಮತಯಾಚನೆ ಮಾಡಿದ್ದಕ್ಕೆ ಮೋದಿ ಅವರನ್ನು ಪ್ರಶ್ನೆ ಮಾಡುತ್ತಿದ್ದೇವೆ: ಡಿಸಿಎಂ ಡಿ.ಕೆ. ಶಿವಕುಮಾರ್

ಕಲಬುರ್ಗಿ, ಮೇ 02: “ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜ್ವಲ್ ರೇವಣ್ಣ ಅವರ ಕೈ ಹಿಡಿದು ಅವರ ಪರ ಮತಯಾಚನೆ ಮಾಡಿದ್ದಕ್ಕೆ ನಾವು ಪೆನ್ ಡ್ರೈವ್ ವಿಚಾರದಲ್ಲಿ ಪ್ರಧಾನಿ ಮೋದಿ ಅವರನ್ನು ಪ್ರಶ್ನೆ ಮಾಡುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.

ಕಲಬುರ್ಗಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯಿಸಿದರು.

ಪೆನ್ ಡ್ರೈವ್ ವಿಚಾರದಲ್ಲಿ ಪ್ರಧಾನಮಂತ್ರಿಗಳನ್ನು ಯಾಕೆ ಎಳೆದು ತರುತ್ತೀರಿ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ ಶಿವಕುಮಾರ್ ಅವರು ಉತ್ತರಿಸಿದ್ದು ಹೀಗೆ

“ಪ್ರಧಾನಮಂತ್ರಿಗಳು ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದ್ದಾರಲ್ಲ. ಅವರದೇ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಕಾರಣ ನಾವು ಪ್ರಧಾನಿಗಳನ್ನು ಪ್ರಶ್ನೆ ಮಾಡುತ್ತೇವೆ” ಎಂದು ತಿಳಿಸಿದರು.

ಬಿಜೆಪಿ ನಾಯಕರ ಮೌನ ಯಾಕೆ?:
ಪ್ರಜ್ವಲ್ ಬಂಧಿಸಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಲಿ ಎಂಬ ಆರ್ ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅಶೋಕ್ ಅವರು ವಿರೋಧ ಪಕ್ಷದ ನಾಯಕರು. ಬೇರೆ ವಿಚಾರಗಳಲ್ಲಿ ವಾಗ್ದಾಳಿ ಮಾಡುತ್ತಿದ್ದವರು ಈ ಪ್ರಕರಣಗಳಲ್ಲಿ ಯಾಕೆ ಮಾತನಾಡುತ್ತಿಲ್ಲ. ಅವರು ತಮ್ಮ ಪಕ್ಷದ ಅಧ್ಯಕ್ಷರಾದ ವಿಜಯೇಂದ್ರ, ಶೋಭಕ್ಕ, ಸಿ.ಟಿ ರವಿ, ಸುನೀಲ್ ಕುಮಾರ್ ಸೇರಿದಂತೆ ಪ್ರಮುಖ ನಾಯಕರನ್ನು ಕರೆದುಕೊಂಡು ಹೋಗಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಮಹಿಳೆಯರ ಬಗ್ಗೆ ಗೌರವ ಇದೆ ಎನ್ನುವ ಕುಮಾರಸ್ವಾಮಿ ಹಾಗು ದೇವೇಗೌಡರು ಕೂಡ ಸಂತ್ರಸ್ತರ ಮನೆಗೆ ಹೋಗಿ ಧೈರ್ಯ ತುಂಬಬೇಕು. ಯಾಕೆ ಭೇಟಿ ಮಾಡುತ್ತಿಲ್ಲ. ಪ್ರಜ್ವಲ್ ಅವರನ್ನು ಯಾಕೆ ಬಂಧಿಸಿಲ್ಲ ಎಂದು ಗೃಹ ಸಚಿವರಿಗೆ ಕೇಳಿ.

ಅಶೋಕ್, ಪ್ರಜ್ವಲ್ ನಮ್ಮ ಬೆಂಬಲದಲ್ಲಿ ಗೆದ್ದ ಸಂಸದ ಎಂದಿದ್ದಾರೆ. ಹೌದು, ಅವರು ನಮ್ಮ ಬೆಂಬಲದಲ್ಲಿ ಗೆದ್ದ ಸಂಸದ. ಹೀಗಾಗಿ ನಾವು ಪ್ರಶ್ನೆ ಮಾಡುತ್ತಿದ್ದೇವೆ. ಈಗ ನಿಮ್ಮ ಬೆಂಬಲದೊಂದಿಗೆ ಅಭ್ಯರ್ಥಿಯಾಗಿದ್ದಾರಲ್ಲ ನೀವು ಯಾಕೆ ಮೌನವಾಗಿದ್ದೀರಿ?” ಎಂದು ಪ್ರಶ್ನಿಸಿದರು.

ಯಾರನ್ನೂ ಬಚ್ಚಿಟ್ಟು ರಾಜಕಾರಣ ಮಾಡುವ ಅಗತ್ಯ ನನಗಿಲ್ಲ;

ಕಾರ್ತಿಕ್ ಅವರನ್ನು ಮಲೇಷ್ಯಾದಲ್ಲಿ ಇಟ್ಟವರು ಯಾರು? ಎಲ್ಲವೂ ಬ್ರದರ್ಸ್ ಆಟ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, “ಹೀಗಂತ ನಮ್ಮ ಬ್ರದರ್ ಹೇಳಿದ್ದಾರಾ? ಹಾಗಿದ್ದರೆ ಅವರಿಗೆ ಎಲ್ಲಾ ವಿಚಾರ ಗೊತ್ತಿರಬೇಕಲ್ಲ. ಕೇಂದ್ರ ಸರ್ಕಾರಕ್ಕೆ ಹೇಳಿ, ಯಾರು ಯಾರನ್ನು ವಿದೇಶಕ್ಕೆ ಕಳುಹಿಸಿದ್ದಾರೆ ಎಂದು ಮಾಹಿತಿ ಪಡೆಯಲಿ. ಅವರನ್ನು ವಿದೇಶಕ್ಕೆ ಕಳುಹಿಸಲು ನನಗೆ ತಲೆ ಕೆಟ್ಟಿದೆಯಾ? ನಾನು ನೇರವಾಗಿ ಹೋರಾಟ ಮಾಡುತ್ತೇನೆ. ಯಾರನ್ನೋ ತೋಟದಲ್ಲಿ ಬಚ್ಚಿಟ್ಟು ರಾಜಕಾರಣ ಮಾಡುವ ಅಗತ್ಯ ನನಗಿಲ್ಲ. ಅವರಿಗೆ ಆ ಅವಶ್ಯಕತೆ ಇದೆ. ಬಿಜೆಪಿ ನಾಯಕರಿಗೆ ಪೆನ್ ಡ್ರೈವ್ ನೀಡಿರುವುದಾಗಿ ಆ ಹುಡುಗ ಹೇಳಿದ್ದಾನೆ. ಇನ್ನು ವಕೀಲರು ನನಗೆ ಕುಮಾರಣ್ಣ ಹಾಗು ಗೌಡರ ಮೇಲೆ ಅಭಿಮಾನ ಅವರಿಗೆ ಭೇಟಿ ಮಾಡಿ ತಿಳಿಸಿದ್ದೆ ಎಂದಿದ್ದಾರಲ್ಲಾ.

ಈ ಪೆನ್ ಡ್ರೈವ್ ಯಾರು ಬಿಟ್ಟಿದ್ದಾರೆ ಎಂಬುದನ್ನು ಮುಂದೆ ಚರ್ಚೆ ಮಾಡೋಣ. ಈಗ ವಿಚಾರ ವಿಷಯಾಂತರ ಮಾಡುವುದು ಬೇಡ” ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಶಕ್ತಿ ತುಂಬಿದ್ದು ಖರ್ಗೆ ಅವರು:

“ಎರಡನೇ ಹಂತದ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಐದು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದು, ಈ ಐದೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಈ ಭಾಗಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಕೊಟ್ಟಿರುವ ಕೊಡುಗೆ ಬಗ್ಗೆ ಜನರಿಗೆ ಅರಿವಿದೆ. ಅವರ ಸೋಲಿಗೆ ನಾವೆಲ್ಲಾ ಪಶ್ಚಾತಾಪ ಪಟ್ಟಿದ್ದೇವೆ. ಹೀಗಾಗಿ ಅವರ ಸೇವೆಗೆ ಈ ಭಾಗದ ಜನ ಉಪಕಾರ ಸ್ಮರಣೆ ಮಾಡಲಿದ್ದಾರೆ.

ಶೋಷಿತ ವರ್ಗದವರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಕ್ತಿ ತುಂಬಿದಂತೆ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಶಕ್ತಿ ನೀಡಿದ್ದಾರೆ.

ಬಾಬುರಾವ್ ಚಿಂಚನಸೂರ್, ಸವದಿ, ಮಾಲಿಕಯ್ಯ ಗುತ್ತೇದಾರ್ ಅವರು ನಮ್ಮ ಪಕ್ಷಕ್ಕೆ ಮರಳಿದ್ದಾರೆ. ಇವರ ಜತೆಗೆ ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ. ಇನ್ನು 93% ನಷ್ಟು ಜನ ನಮ್ಮ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಬಿಜೆಪಿ ಮಹಿಳೆಯರಿಗೆ, ಕಾರ್ಯಕರ್ತರಿಗೆ ಚೊಂಬು ನೀಡಿದೇ. ಕಾಂಗ್ರೆಸ್ ಪಕ್ಷದ ಯೋಜನೆಗಳಿಂದ ಬದುಕು ಸಾಗಿಸಲು ನೆರವಾಗಿದೆ ಎಂದು ಮನವರಿಕೆಯಾಗಿದೆ. ಹೀಗಾಗಿ ಈ ಭಾಗದಲ್ಲಿ ಜನ ಬಹಳ ಉತ್ಸಾಹದಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.”

ಉಪಚುನಾವಣೆಯಲ್ಲಿ 50 ಸಾವಿರ ಅಂತರದಲ್ಲಿ ಗೆಲುವು:

ಇನ್ನು ಸುರಪುರ ಉಪಚುನಾವಣೆ ಬಗ್ಗೆ ಕೇಳಿದಾಗ, “ಕಳೆದ ಚುನಾವಣೆ ಬಳಿಕ ಬಿಜೆಪಿ ಅಭ್ಯರ್ಥಿ ತಮ್ಮ ಕಾರ್ಯಕರ್ತರಿಗೆ 2 ವರ್ಷ ನಾನು ಇರುವುದಿಲ್ಲ, ಯಾರೂ ಮನೆಕಡೆ ಬರಬೇಡಿ ಎಂದು ಹೇಳಿದ್ದರು. ಇನ್ನು ಅವರ ಕಾರ್ಯಕರ್ತರೂ ಕೂಡ ನಮ್ಮ ಪಾಲಿಕೆ ಚುನಾವಣೆ ಸಮಯದಲ್ಲಿ ಅವರೇ ನಮ್ಮ ಜೊತೆ ಇರಲಿಲ್ಲ. ಈಗ ನಾವು ಯಾಕೆ ಅವರ ಪರ ಚುನಾವಣೆ ಮಾಡಬೇಕು ಎಂದು ಸುಮ್ಮನಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಾತಾವರಣವಿದೆ” ಎಂದು ತಿಳಿಸಿದರು.

More News

You cannot copy content of this page