KS ESHWARAPPA: ಬಿಜೆಪಿ ವಿರುದ್ಧ ಈಶ್ವರಪ್ಪ ಗರಂ

ಶಿವಮೊಗ್ಗ: ಕಳೆದ ಹಲವು ದಿನಗಳಿಂದ ಮೌನವಾಗಿದ್ದ ಈಶ್ವರಪ್ಪ ಇಂದು ಮತ್ತ ಗುಡುಗಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ ಶಿವಮೊಗ್ಗದಲ್ಲಿ ಸೋಲಿನ ಭಯದಿಂದಾಗಿ ನನ್ನ ಪ್ರಚಾರ ಕಾರ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಮುಖ್ಯವಾಗಿ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ನಡೆದ ಘಟನೆಯನ್ನು ಈಶ್ವರಪ್ಪ ಪ್ರಸ್ತಾಪಿಸಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಕಾರ್ಯಕ್ರಮಕ್ಕೆ ತಡೆ ಒಡ್ಡಲಾಗುತ್ತಿದೆ. ಸಭೆಗಳಿಗೆ ಅನುಮತಿ ನಿರಾಕರಿಸಲಾಗುತ್ತಿದೆ ಎಂದು ಈಶ್ವರಪ್ಪ ಟೀಕಿಸಿದ್ದಾರೆ.
ಇಂತಹ ಟೊಳ್ಳು ಬೆದರಿಕೆಗಳಿಗೆ ಮಣಿಯುವ ವ್ಯಕ್ತಿ ನಾನಲ್ಲ, ಎಲ್ಲವನ್ನು ಎದುರಿಸುತ್ತೇನೆ ಎಂದು ಈಶ್ವರಪ್ಪ ರಾಜಕೀಯ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ.
ಈ ಬೆಳವಣಿಗೆ ಮಧ್ಯೆ ಚುನಾವಣಾ ಪ್ರಚಾರದಲ್ಲಿ ಮೋದಿ ಫೋಟೋ ಬಳಸಲು ನನಗೆ ಅನುಮತಿ ದೊರೆತಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಮೋದಿ ಫೋಟೋಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸುವುದಾಗಿ ಈಶ್ವರಪ್ಪ ತಿಳಿಸಿದ್ದಾರೆ.
ಫೋಟೋ ಜೊತೆ ಮೋದಿ ಅವರ ವಿಚಾರ ಧಾರೆಗಳನ್ನು ಪ್ರಚಾರಪಡಿಸುತ್ತೇನೆ ಎಂದು ಈಶ್ವರಪ್ಪ ಮಾಹಿತಿ ನೀಡಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ. ಇದಕ್ಕಾಗಿ ಅಡ್ಡ ದಾರಿ ಹಿಡಿದಿದೆ ಎಂದು ಈಶ್ವರಪ್ಪ ಟೀಕಿಸಿದ್ದಾರೆ.
ಇನ್ನೊಂದೆಡೆ ಶಿಕಾರಿಪುರದಲ್ಲಿರುವ ಈಶ್ವರಪ್ಪ ಚುನಾವಣಾ ಕಚೇರಿಯ ಮುಂದೆ ವಾಮಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕಚೇರಿ ಬಾಗಿಲಿನ ಮುಂದೆ ಲಿಂಬೆ ಹಣ್ಣು, ಅರಿಶಿಣ ಪತ್ತೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈಶ್ವರಪ್ಪ ಈ ಮಾಹಿತಿ ಹಂಚಿಕೊಂಡಿದ್ದಾರೆ. ಪುತ್ರ ಕಾಂತೇಶ್‌ ಕುರಿತಂತೆ ಕೂಡ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಕಾಂತೇಶ್ ಸ್ಟೇ ತಂದಿರೋದು ಇತರ ವಿಷಯಕ್ಕೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ವಿರುದ್ಧ ತೊಡೆತಟ್ಟಿ ಚುನಾವಣಾ ಕದನಕ್ಕೆ ಧುಮುಕಿರುವ ಈಶ್ವರಪ್ಪ, ತಮ್ಮ ಹೋರಾಟದಲ್ಲಿ ಯಶಸ್ಸುಗಳಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆಗೆ ಜೂನ್ 4ರಂದು ಉತ್ತರ ದೊರೆಯಲಿದೆ

More News

You cannot copy content of this page