ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದ ಬಳಿಕ ದೂರದ ಜರ್ಮನಿಗೆ ಹಾರಿ ಹೋಗಿದ್ದ ಸಂಸದ ಪ್ರಜ್ವಲ್ ರೇವಣ್ಣ ಇದೀಗ ತಮ್ಮ ವಾಸ್ತವ್ಯ ಬದಲಾಯಿಸಿದ್ದಾರೆ. ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ದುಬೈಗೆ ತಮ್ಮ ವಾಸ್ತವ್ಯ ಬದಲಾಯಿಸಿದ್ದಾರೆ.
ಕಳೆದ ರಾತ್ರಿ ಪ್ರಜ್ವಲ್ ರೇವಣ್ಣ ದುಬೈಗೆ ಬಂದಿದ್ದಾರೆ.
ದುಬೈನ ವಿಲಾಸಿ ಹೋಟೆಲ್‌ನಲ್ಲಿ ಅವರು ವಾಸ್ತವ್ಯ ಹೂಡಿದ್ದಾರೆ ಎಂದು ವರದಿಯಾಗಿದೆ. ಜರ್ಮನಿಗೆ ಹೋಲಿಸಿದರೆ ಭಾರತ ಮತ್ತು ದುಬೈ ನಡುವೆ ಅಂತರ ಕಡಿಮೆ. ಹೆಚ್ಚು ಕಡಿಮೆ 3 ಗಂಟೆಗಳಲ್ಲಿ ಬೆಂಗಳೂರು ತಲುಪಬಹುದಾಗಿದೆ.
ಪ್ರಜ್ವಲ್ ರೇವಣ್ಣ ದಿಢೀರನೆ ತಮ್ಮ ವಾಸ್ತವ್ಯ ಬದಲಾಯಿಸಿರುವುದು ಹಲವು ಶಂಕೆಗಳಿಗೆ ಕಾರಣವಾಗಿದೆ. ಭಾರತಕ್ಕೆ ಶೀಘ್ರವಾಗಿ ಮರಳುವ ನಿಟ್ಟಿನಲ್ಲಿ ಪ್ರಜ್ವಲ್ ದುಬೈಗೆ ಶಿಫ್ಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ
ಈ ಹಿಂದೆ ಜೂನ್ 16ರಂದು ಪ್ರಜ್ವಲ್ ಭಾರತಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿತ್ತು. ಪ್ಲೈಟ್ ಟಿಕೆಟ್ ಕೂಡ ಬುಕ್ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು
ಈ ಮಧ್ಯೆ ಸಂಸದ ಪ್ರಜ್ವಲ್‌ಗೆ ಯಾವುದೇ ರೀತಿಯ ವೀಸಾ ನೀಡಿಲ್ಲ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಪ್ರಜ್ವಲ್ , ರಾಜತಾಂತ್ರಿಕ ಪಾಸ್‌ಪೋರ್ಟ್ ಮೇಲೆ ತೆರಳಿದ್ದಾರೆ. ರಾಜತಾಂತ್ರಿಕ ಪಾಸ್ ಪೋರ್ಟ್ ಇದ್ದವರಿಗೆ ವೀಸಾದ ಅಗತ್ಯ ಇಲ್ಲ ಎಂದು ವಿದೇಶಾಂಗ ಇಲಾಖೆಯ ವಕ್ತಾರರರು ದೆಹಲಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ವಿದೇಶ ಪ್ರವಾಸದಲ್ಲಿ ವಿದೇಶಾಂಗ ಇಲಾಖೆ ಯಾವುದೇ ರೀತಿಯ ಪಾತ್ರ ವಹಿಸಿಲ್ಲ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.
ಈ ಮಧ್ಯೆ ಬಂಧನದ ಭೀತಿ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ತಂದೆ ಹೆಚ್ ಡಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದಾರೆ.
ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಗಂಟೆಗೊಂದು ತಿರುವು ಪಡೆದುಕೊಳ್ಳುತ್ತಿದ್ದು, ಜೆಡಿಎಸ್- ಕಾಂಗ್ರೆಸ್ ನಾಯಕರ ಮಧ್ಯೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ