ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜುಮಾಡಿರುವ ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಮಾಡಿರುವ ಮನವಿಯನ್ನು ಎಸ್‌ಐಟಿ ತಳ್ಳಿಹಾಕಿದೆ. ವಿದೇಶದಲ್ಲಿ ಇರುವ ಕಾರಣ ಶರಣಾಗತಿಗೆ ಒಂದು ವಾರದ ಸಮಯಾವಕಾಶ ನೀಡುವಂತೆ ಪ್ರಜ್ವಲ್ ರೇವಣ್ಣ ಮನವಿ ಮಾಡಿದ್ದರು. ಇದೀಗ ಪ್ರಜ್ವಲ್ ರೇವಣ್ಣ ಮನವಿಯನ್ನು ವಿಶೇಷ ತನಿಖಾ ದಳ ತಳ್ಳಿಹಾಕಿದೆ.
ಪ್ರಜ್ವಲ್ ವಿರುದ್ಧ ಗಂಭೀರವಾದ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಮಯಾವಕಾಶ ನೀಡಲು ಸಾಧ್ಯ ಇಲ್ಲ ಎಂದು ಎಸ್‌ಐಟಿ ಹೇಳಿದೆ.
ಈ ಮಧ್ಯೆ ಇಂದು ಪ್ರಜ್ವಲ್ ರೇವಣ್ಣಗೆ ಎರಡನೆ ನೋಟಿಸ್ ಜಾರಿ ಮಾಡಲು ವಿಶೇಷ ತನಿಖಾ ದಳ ತೀರ್ಮಾನಿಸಿದೆ. 9 ದಿನಗಳ ಅವಧಿಯಲ್ಲಿ ಮೂರು ಬಾರಿ ನೋಟಿಸ್ ನೀಡಲು ತನಿಖಾಧಿಕಾರಿಗಳಿಗೆ ಅವಕಾಶ ಇದೆ. ಮೊದಲ ನೋಟಿಸ್ ಜಾರಿ ಮಾಡಿ ಈಗಾಗಲೇ ಮೂರು ದಿನಗಳಾಗಿವೆ. ಈ ಹಿನ್ನೆಲೆಯಲ್ಲಿ ಎರಡನೆ ಬಾರಿ ನೋಟಿಸ್ ಜಾರಿಗೆ ಸಿದ್ದತೆ ನಡೆಸಲಾಗಿದೆ.
ಈ ಮಧ್ಯೆ ಮೇ 15ರಂದು ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರಲು ಪ್ಲೈಟ್ ಟಿಕೆಟ್ ಬುಕ್ಕಿಂಗ್ ಮಾಡಿದ್ದಾರೆ. ಮೇ 16ರಂದು ರಾತ್ರಿ 12.30ಕ್ಕೆ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ. ಅಂದೇ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣ ಆಗಮನಕ್ಕೆ ಮೇ 16ರ ತನಕ ಕಾಯದೆ ಅದಕ್ಕೆ ಮುಂಚಿತವಾಗಿ ಭಾರತಕ್ಕೆ ಕರೆ ತರುವ ಸಾಧ್ಯತೆ ಕೂಡ ಇದೆ. ಸಿಎಂ ಸಿದ್ದರಾಮಯ್ಯ ಈಗಾಗಲೇ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿ ಅವರನ್ನು ತಕ್ಷಣ ಕರೆತರುವ ವ್ಯವಸ್ಥೆ ಮಾಡಿ ಎಂದು ಸಿದ್ದರಾಮಯ್ಯ ಮನವಿಮಾಡಿದ್ದಾರೆ.
ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳ ನೆರವು ಪಡೆಯುವಂತೆ ಕೂಡ ಸಿದ್ದರಾಮಯ್ಯ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ
ಈ ಮಧ್ಯೆ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಮಲೇಷ್ಯಾದಲ್ಲಿ ಇದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ಮಧ್ಯೆ ಟಾಕ್ ವಾರ್ ಕೂಡ ಆರಂಭವಾಗಿದೆ