Search

CHAMARAJANAGAR: ಗ್ರಾಮದಲ್ಲಿ ಕೇವಲ ಬೂಟುಗಳ ಸದ್ದು, ಜನರೇ ಇಲ್ಲ

ಚಾಮರಾಜನಗರ: ಮೊದಲ ಹಂತದ ಚುನಾವಣೆ ನಡೆದ ಏ,26ರಂದು ಹಿಂಸಾಚಾರಸಂಭವಿಸಿದ್ದ ಚಾಮರಾಜನಗರ ಜಿಲ್ಲೆಯ ಇಂಡಿಗನತ್ತ ಗ್ರಾಮದಲ್ಲಿ ಇದೀಗ ನೀರವ ಮೌನ ನೆಲೆಸಿದೆ.
ಪೊಲೀಸರಿಗೆ ಹೆದರಿ ಗ್ರಾಮದ ಬಹುತೇಕ ಮಂದಿ ಗ್ರಾಮ ತೊರೆದಿದ್ದಾರೆ. ಮೂಲ ಸೌಕರ್ಯ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಬಹಿಷ್ಕಾರದ ಮಧ್ಯೆ ಒಂದು ಗುಂಪು ಮತದಾನ ಮಾಡಲು ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಹಿಂಸಾಚಾರ ಸಂಭವಿಸಿತ್ತು.
ತಹಶೀಲ್ದಾರ್ ಮೇಲೆ ಹಲ್ಲೆ ನಡೆದಿತ್ತು. ಇವಿಎಂ ಯಂತ್ರಗಳನ್ನು ಧ್ವಂಸಗೊಳಿಸಲಾಗಿತ್ತು. ಇದೀಗ ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನ ನಡೆದಿದ್ದರೂ ಹಿಂಸಾಚಾರದ ಗಾಯ ಇನ್ನೂ ಮಾಸಿಲ್ಲ
ಮೊದಲ ಹಂತದ ಚುನಾವಣೆ ವೇಳೆ ನಡೆದ ಹಿಂಸಾಚಾರವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣ ಸಂಬಂಧ ಗ್ರಾಮದ 200ಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಗ್ರಾಮಕ್ಕೆ ದಾಳಿ ನಡೆಸುತ್ತಿರುವ ಪೊಲೀಸರು ಆರೋಪಿಗಳನ್ನು ಬಂಧಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪೊಲೀಸರ ಬಂಧನಕ್ಕೆ ಹೆದರಿ ಬಹುತೇಕ ಗ್ರಾಮಸ್ಥರು ಪಲಾಯನ ಮಾಡಿದ್ದಾರೆ. ಇದುವರೆಗೆ 33 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದೀಗ ಗ್ರಾಮದಲ್ಲಿ ಜಾನುವಾರುಗಳಿಗೆ ಮೇವು ಹಾಕಲು ಜನರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಿಹಾಕಿದ್ದ ಸ್ಥಿತಿಯಲ್ಲಿ ಎರಡು ಕೋಣಗಳು ಸಾವನ್ನಪ್ಪಿವೆ. ಇದು ಗ್ರಾಮದ ಕರಾಳ ಮುಖವನ್ನು ಅನಾವರಣಗೊಳಿಸಿದೆ.
ಬುಡಕಟ್ಟು ಜನರೇ ವಾಸಿಸುತ್ತಿರುವ ಇಂಡಿಗನತ್ತ ಗ್ರಾಮದಲ್ಲಿ ಇದೀಗ ನೀರವ ಮೌನ ಆವರಿಸಿದೆ. ಪೊಲೀಸರು ಯಾವಾಗ ದಾಳಿ ಮಾಡುತ್ತಾರೆ ಎಂಬ ಭೀತಿಯಲ್ಲಿ ಜನರು ಬದುಕು ಸಾಗಿಸುತ್ತಿದ್ದಾರೆ.
ವೃದ್ದರು ಮಾತ್ರ ಮನೆಯಲ್ಲಿ ಇದ್ದಾರೆ. ನಡೆದಾಡಲು ಅಸಾಧ್ಯವಾಗಿರುವ ವೃದ್ಧರು ಮಾತ್ರ ಪೊಲೀಸರ ಪ್ರಶ್ನೆಗಳಿಗೆ ಉತ್ತರ ನೀಡಲು ಯತ್ನಿಸುತ್ತಿದ್ದಾರೆ.
ಚಾಮರಾಜನಗರ ಜಿಲ್ಲಾಡಳಿತದ ವೈಫಲ್ಯದಿಂದಲೇ ಹಿಂಸಾಚಾರ ಸಂಭವಿಸಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

More News

You cannot copy content of this page