ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರುವ ಹಾಸನ ಅಶ್ಲೀಲ ವಿಡಿಯೋ ಪ್ರಕರಣ ದೆಹಲಿಯಲ್ಲಿ ಕೂಡ ಕಂಪನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ ರಾಜ್ಯ ಸರ್ಕಾರದ ನಿಲುವು ಏನಿರಬೇಕು ಎಂಬುದನ್ನು ಸೂಚಿಸಿದ್ದಾರೆ.
ರಾಜ್ಯ ಸರ್ಕಾರ ಸಂತ್ರಸ್ತೆಯರ ಪರ ನಿಲ್ಲಬೇಕು. ಅವರಿಗೆ ಧೈರ್ಯ ತುಂಬ ಬೇಕು. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ರಾಹುಲ್ ಗಾಂಧಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಾಹುಲ್ ಗಾಂಧಿ ಪತ್ರ ಬರೆದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಪ್ರಕರಣ ಸಂಬಂಧ ತನಿಖೆಯಲ್ಲಿ ಇದುವರೆಗೆ ಸಾಧಿಸಲಾದ ಪ್ರಗತಿ ಕುರಿತು ಮಾಹಿತಿ ಪಡೆದಿದ್ದಾರೆ. ಪ್ರಕರಣದ ಎ-1 ಆರೋಪಿಯಾಗಿರುವ ರೇವಣ್ಣರನ್ನು ಇದುವರೆಗೆ ಯಾಕೆ ಬಂಧಿಸಿಲ್ಲ ಎಂದು ಸಿಎಂ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಸಿಎಂ ಪ್ರಶ್ನೆಗೆ ಉತ್ತರಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಯಲ್ಲಿ ಸಾಧಿಸಲಾದ ಪ್ರಗತಿ ಕುರಿತು ಮಾಹಿತಿ ನೀಡಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ.
ಇದೀಗ ಪ್ರಜ್ವಲ್ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ಬ್ಲೂ ಕಾರ್ನರ್ ನೋಟಿಸ್‌ಗೆ ಮನವಿ ಮಾಡುವ ಸಾಧ್ಯತೆ ಇದೆ. ಸಿಬಿಐಗೆ ವಿಶೇಷ ತನಿಖಾ ದಳ ಮನವಿ ಮಾಡಲಿದೆ. ಇದು ತನಿಖೆಯ ವೇಗ ಹೆಚ್ಚಿಸಲಿದೆ.
ಈ ಮಧ್ಯೆ ಸಿಎಂ ಸಿದ್ದರಾಮಯ್ಯ, ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜ್ಯ ಸರ್ಕಾರ ಸಂತ್ರಸ್ತೆಯರ ಪರ ನಿಲ್ಲಲಿದೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಆರೋಪಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಕಾನೂನಿನಂತೆ ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಈ ಭರವಸೆಯನ್ನು ರಾಹುಲ್ ಗಾಂಧಿ ಸೇರಿದಂತೆ ಎಲ್ಲರಿಗೂ ನೀಡುವುದಾಗಿ ಸಿಎಂ ಎಕ್ಸ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಬಿಸಿ ಮುಟ್ಟಿಸಿರುವ ಹಿನ್ನೆಲೆಯಲ್ಲಿ ಕೇಸ್ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆಯುವ ಎಲ್ಲ ಸಾಧ್ಯತೆ ನಿಚ್ಚಳವಾಗಿದೆ