ಡೆಹ್ರಾಡೂನ್: ಪ್ರವಾಸಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಡೆಹ್ರಾಡೂನ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಐವರು ದುರಂತದಲ್ಲಿ ಮೃತಪಟ್ಟಿದ್ದಾರೆ. ಆಳವಾದ ಕಂದಕಕ್ಕೆ ಕಾರು ಉರುಳಿ ಬಿದ್ದ ಪರಿಣಾಮ ಐವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ಡೆಹ್ರಾಡೂನ್ ಸಮೀಪದ ಪಾನಿವಾಲ ಬಾಂಡ್ ಬಳಿ ಈ ದುರಂತ ಸಂಭವಿಸಿದೆ. ಕಾರಿನಲ್ಲಿ ಮೋಜು ಮಸ್ತಿಯಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳ ಕಾರು ಕಣಿವೆಗೆ ಉರುಳಿ ಬಿದ್ದ ಕಾರಣ 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮೃತಪಟ್ಟ ಎಲ್ಲರೂ ಡೆಹ್ರಾಡೂನ್ ಐಎಂಎಸ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. ಓರ್ವ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಯಲ್ಲಿ ಇರುವ ನ್ಯಾನ್ಸಿ ಎಂಬ ವಿದ್ಯಾರ್ಥಿನಿಯ ಸ್ಥಿತಿ ಅತ್ಯಂತ ಗಂಭೀರವಾಗಿದೆ.
ಮೃತಪಟ್ಟವರಲ್ಲಿ ನಾಲ್ವರು ವಿದ್ಯಾರ್ಥಿಗಳು,ಓರ್ವ ವಿದ್ಯಾರ್ಥಿನಿ ಸೇರಿದ್ದಾರೆ ಎಂದು ಎಸ್ ಪಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.
ತಿರುವಿನಲ್ಲಿ ಕಾರಿನ ನಿಯಂತ್ರಣ ತಪ್ಪಿದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ
ಕಳೆದ ವಾರ ರಾಜ್ಯದ ಮೇಕೆದಾಟು ಸಂಗಮ ಪ್ರದೇಶದಲ್ಲಿ ಇದೇ ರೀತಿಯ ದುರಂತ ಸಂಭವಿಸಿತ್ತು. ಪ್ರವಾಸಕ್ಕೆ ತೆರಳಿದ್ದ ಇಂಜಿನಿಯರಿಂಗ್ ಕಾಲೇಜಿನ ಐವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ಬಹುತೇಕ ಸಂದರ್ಭಗಳಲ್ಲಿ ಮನೆಯವರಿಗೆ ತಿಳಿಸದೇ ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ಜೊತೆ ಪ್ರವಾಸ ಕೈಗೊಳ್ಳುತ್ತಾರೆ. ಇದು ಸ್ವಾಭಾವಿಕ. ಆದರೆ ಪ್ರವಾಸದ ವೇಳೆ ಸೂಕ್ತ ಮುನ್ನೆಚ್ಚರಿಕೆ ಕೂಡ ಅಗತ್ಯವಾಗಿದೆ. ಇಲ್ಲದಿದ್ದರೆ ಅದು ಪ್ರಾಣಕ್ಕೆ ಸಂಚಕಾರ ತರಲಿದೆ