ಕಲಬುರಗಿ: ಹಾಸನದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಸನ ಪ್ರಕರಣಕ್ಕೂ ಬಿಜೆಪಿಗೂ ಏನು ಸಂಬಂಧ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಬಿಜೆಪಿ ಮೌನ ಮುರಿಯಬೇಕು ಎಂದು ಆಗ್ರಹಿಸಿದ್ದ ಶಿವಕುಮಾರ್‌ಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಈ ಪ್ರಕರಣ ನನಗೆ ಮತ್ತು ದೇವೇಗೌಡರಿಗೆ ಸಂಬಂಧಿಸಿದ್ದಾಗಿದೆ. ಈ ಹಿನ್ನೆಲೆಯಲ್ಲಿ ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಇದೀಗ ಅಭಿವೃದ್ಧಿ ವಿಚಾರಗಳನ್ನು ಕೈಬಿಟ್ಟು ಹಾಸನ ವಿಷಯವನ್ನು ಕೈಗೆತ್ತಿಕೊಂಡಿದೆ. ಕಾಂಗ್ರೆಸ್ ಸರ್ಕಾರ ಈ ವಿಷಯವನ್ನು ಪ್ರಚಾರಕ್ಕೆ ಬಳಸುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ. ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಕೂಡ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಹೌದು ನನ್ನ ಮಾನಸಿಕ ಸ್ಥಿಮಿತ ತಪ್ಪಿದೆ. ಅದಕ್ಕಾಗಿ ಈ ರೀತಿ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಸಂತ್ರಸ್ತೆಯೊಬ್ಬರು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ. ಇದು 2021ರ ಪ್ರಕರಣವಾಗಿದ್ದು, ಅದರ ಮಾಹಿತಿ ಹೇಗೆ ಮಾಧ್ಯಮಗಳಲ್ಲಿ ಸೋರಿಕೆಯಾಗಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಹಾಸನ ಪ್ರಕರಣದಲ್ಲಿ ಪ್ರಧಾನಿ ಮೋದಿ ಹೆಸರನ್ನು ಎಳೆದು ತರಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಕೂಡ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಒಕ್ಕಲಿಗ ನಾಯಕತ್ವದ ಕುರಿತು ಕೂಡ ಮಾತನಾಡಿರುವ ಕುಮಾರಸ್ವಾಮಿ , ಇಂತಹ ಚೀಪ್ ವಿಷಯಗಳನ್ನು ಮುಂದಿಟ್ಟು ಯಾರು ಕೂಡ ನಾಯಕನಾಗಲು ಸಾಧ್ಯ ಇಲ್ಲ ಎಂದು ಕುಟುಕಿದ್ದಾರೆ. ಪರೋಕ್ಷವಾಗಿ ಶಿವಕುಮಾರ್ ಕನಸಿನ ಬಗ್ಗೆ ಲೇವಡಿ ಮಾಡಿದ್ದಾರೆ.
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಮೈತ್ರಿಕೂಟ ಅತೀ ಹೆಚ್ಚು ಸ್ಥಾನ ಗಳಿಸಲಿದೆ ಎಂಬ ವಿಶ್ವಾಸವನ್ನು ಕೂಡ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಎಸ್ಐಟಿ ತಂಡ ಇಂದು ಹೊಳೆನರಸೀಪುರದಲ್ಲಿರುವ ರೇವಣ್ಣ ಮನೆಯಲ್ಲಿ ಮಹಜರು ನಡೆಸಲಿದೆ. ಬೆಂಗಳೂರಿನಿಂದ ವಿಶೇಷ ತಂಡ ಹೊಳೆನರಸೀಪುರಕ್ಕೆ ತೆರಳಿದೆ. ಎಸ್ಐಟಿ ತಂಡ ಆಗಮಿಸುವ ಮೊದಲೇ ರೇವಣ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.