Search

HD REVANNA CASE: ಅಪಹರಣಕ್ಕೆ ತುತ್ತಾಗಿದ್ದ ಸಂತ್ರಸ್ತ ಮಹಿಳೆಯ ರಕ್ಷಣೆ

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿರುದ್ಧ ದಾಖಲಾಗಿದ್ದ ಮಹಿಳೆಯ ಅಪಹರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಇದೀಗ ಅಪಹರಣಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತೆ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಸಂಬಂಧ ಕೆ. ಆರ್ . ನಗರದಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.
ಇದೀಗ ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ಸಂತ್ರಸ್ಥೆಯನ್ನು ರಕ್ಷಿಸಲಾಗಿದೆ. ಎಸ್‌ಐಟಿ ಪೊಲೀಸರು ಸಂತ್ರಸ್ಥೆಯನ್ನು ರಕ್ಷಿಸಿ ಸೂಕ್ತ ಭದ್ರತೆ ನೀಡಿದ್ದಾರೆ.
ಮಾಜಿ ಸಚಿವ ರೇವಣ್ಣ ಅವರ ನಿಕಟ ವರ್ತಿಯೊಬ್ಬರ ಮನೆಯಲ್ಲಿ ಸಂತ್ರಸ್ತೆಯನ್ನು ಇರಿಸಲಾಗಿತ್ತು ಎಂದು ವರದಿಯಾಗಿದೆ. ಏ.29ರಂದು ಸಂತ್ರಸ್ತೆ ನಿಗೂಢವಾಗಿ ಕಣ್ಮರೆಯಾಗಿದ್ದರು. ತನ್ನ ತಾಯಿಯನ್ನು ಅಪಹರಿಸಲಾಗಿದೆ ಎಂದು ಸಂತ್ರಸ್ತೆ ಪುತ್ರ ಪೊಲೀಸರಿಗೆ ದೂರು ನೀಡಿದ್ದರು. ಹೆಚ್ ಡಿ ರೇವಣ್ಣ ಕೈವಾಡ ಇದೆ ಎಂದು ಕೂಡ ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ಸಂಬಂಧ ಸತೀಶ್ ಬಾಬು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹುಣಸೂರು ತಾಲೂಕಿನ ಕಾಳೇನಳ್ಳಿಯಲ್ಲಿ ಇರುವ ತೋಟದ ಮನೆಯೊಂದರಿಂದ ಸಂತ್ರಸ್ತೆ ಮಹಿಳೆಯನ್ನು ರಕ್ಷಿಸಲಾಗಿದೆ. ಈ ಮಧ್ಯೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೂಡ ನಡೆದಿದೆ.
ರಾಜ್ಯ ರಾಜಕಾರಣದಲ್ಲಿ ಹಾಸನ ಪ್ರಕರಣ ಮಾತ್ರ ಸದ್ದು ಮಾಡುತ್ತಿದ್ದು, ಎರಡನೆ ಹಂತದ ಲೋಕಸಭೆ ಚುನಾವಣೆಯ ಪ್ರಚಾರ ತೆರೆಮರೆಗೆ ಸರಿದಿದೆ. ನಾಳೆ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.

More News

You cannot copy content of this page