ಧಾರವಾಡ: ಹುಬ್ಬಳ್ಳಿಯ ನವನಗರದ ಅಪ್ರಾಪ್ತ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಆಕೆಯನ್ನು ಗರ್ಭಿಣಿ ಮಾಡಿದ ಸದ್ದಾಂಹುಸೇನ್ ಎಂಬ ಯುವಕನ ಕಾಲಿಗೆ ಪೊಲೀಸರು ಗುಂಡೇಟು ಕೊಟ್ಟಿದ್ದಾರೆ.
ಆರೋಪಿ ಸದ್ದಾಂಹುಸೇನ್‌ನ್ನು ಬಂಧಿಸಿ ಠಾಣೆಗೆ ಸ್ಥಳಾಂತರ ಮಾಡುವಾಗ ಆತ ತಪ್ಪಿಸಿಕೊಳ್ಳಲು ಇನ್‌ಸ್ಪೆಕ್ಟರ್ ಹಾಗೂ ಇನ್ನೋರ್ವ ಪೊಲೀಸ್ ಸಿಬ್ಬಂದಿ ಮೇಲೆ ಪೆನ್ ಹಾಗೂ ನೈಫ್‌ನಿಂದ ಹಲ್ಲೆ ಮಾಡಿದ್ದಾನೆ. ಪೊಲೀಸ್ ಸಿಬ್ಬಂದಿ ಅರುಣ ಹಾಗೂ ಇನ್‌ಸ್ಪೆಕ್ಟರ್ ಸಂಗಮೇಶ ಅವರ ಮೇಲೆ ನೈಫ್‌ನಿಂದ ಹಲ್ಲೆ ಮಾಡಿದಾಗ, ಪೊಲೀಸರು ಮೊದಲು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆಗ ಆತ ತಪ್ಪಿಸಿಕೊಂಡು ಓಡಲು ಯತ್ನಿಸಿದಾಗ ಆತನ ಎಡಗಾಲಿಗೆ ಫೈರ್ ಮಾಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಗಾಯಗೊಂಡಿರುವ ಇನ್‌ಸ್ಪೆಕ್ಟರ್ ಸಂಗಮೇಶ ಹಾಗೂ ಇನ್ನೋರ್ವ ಪೊಲೀಸ್ ಸಿಬ್ಬಂದಿ ಅರುಣ ಅವರನ್ನು ಧಾರವಾಡದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗುಂಡೇಟು ತಿಂದ ಸದ್ದಾಂನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟು ನಂತರ ಆತನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ರವಾನೆ ಮಾಡಲಾಗಿದೆ.
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಈ ಆರೋಪಿ ಸದ್ದಾಂ ಎಪಿಎಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೇ ಇದ್ದಿದ್ದರಿಂದ ಆತನನ್ನು ಪತ್ತೆ ಹಚ್ಚಲು ಧಾರವಾಡ ವಿದ್ಯಾಗಿರಿ ಠಾಣೆಯ ಇನ್‌ಸ್ಪೆಕ್ಟರ್ ಸಂಗಮೇಶ ನೇತೃತ್ವದ ಈ ಪೊಲೀಸ್ ತಂಡ ಹೋಗಿತ್ತು. ಆಗ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಸದ್ದಾಂನ ಕಾಲಿಗೆ ಇನ್‌ಸ್ಪೆಕ್ಟರ್ ಸಂಗಮೇಶ ಅವರು ಗುಂಡೇಟು ಕೊಟ್ಟಿದ್ದಾರೆ.