ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಶ್ಲೀಲ ವಿಡಿಯೋ ಕೇಸ್ ಸಂಚಲನ ಸೃಷ್ಟಿಸಿರುವಂತೆಯೇ ಇದರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಕ್ಕಲಿಗ ನಾಯಕತ್ವದ ಪ್ರಶ್ನೆ ಕೂಡ ಎದುರಾಗಿದೆ.
ಒಕ್ಕಲಿಗ ನಾಯಕತ್ವ ಕುರಿತಂತೆ ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಮಧ್ಯೆ ಟಾಕ್ ವಾರ್ ಆರಂಭವಾಗಿದೆ.
ನಾನು ಇದೀಗ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿದ್ದೇನೆ. ಒಕ್ಕಲಿಗ ಸಮುದಾಯದಲ್ಲಿ ನಾನು ಹುಟ್ಟಿದ್ದೇನೆ. ಹುಟ್ಟಿನಲ್ಲಿ ಒಕ್ಕಲಿಗನಾಗಿದ್ದರೂ ನನಗೆ ಒಕ್ಕಲಿಗ ನಾಯಕತ್ವ ಬೇಡ. ಆದರ ಬಗ್ಗೆ ಆಸಕ್ತಿ ಕೂಡ ಇಲ್ಲ ಎಂದು ಡಿ ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ದೇವೇಗೌಡ ಕುಟುಂಬ ಹೊಂದಿರುವ ಪ್ರಾಬಲ್ಯ ಕುಗ್ಗಿಸಲು ತೆರೆಮರೆಯ ಪ್ರಯತ್ನ ನಡೆಯುತ್ತಿದೆ ಎಂಬ ಗಂಭೀರ ಆರೋಪದ ಮಧ್ಯೆ ಈ ಬೆಳವಣಿಗೆ ಸಂಭವಿಸಿದೆ.
ಒಕ್ಕಲಿಗ ನಾಯಕತ್ವಕ್ಕೆ ಸಂಬಂಧಿಸಿ ಹೇಳುವುದಾದರೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರೇ ನಿಸ್ಸಂಶಯವಾಗಿ ಮುಂಚೂಣಿಯಲ್ಲಿದ್ದಾರೆ.
ದೇವೇಗೌಡರು ಸಮುದಾಯದ ಮೇಲೆ ತಮ್ಮದೇ ಆದ ಹಿಡಿತಹೊಂದಿದ್ದಾರೆ.
ಇದೀಗ ಕುಮಾರಸ್ವಾಮಿ ಈ ಎಲ್ಲ ಬೆಳವಣಿಗೆ ಕುರಿತು ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಚೀಪ್ ವಿಷಯಗಳನ್ನು ಮುಂದಿಟ್ಟು ಯಾರೂ ಒಕ್ಕಲಿಗ ನಾಯಕರಾಗಲು ಸಾಧ್ಯ ಇಲ್ಲ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.
ಪರೋಕ್ಷವಾಗಿ ಡಿ ಕೆ ಶಿವಕುಮಾರ್‌ಗೆ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ದೇವೇಗೌಡ ಕುಟುಂಬ ವರ್ಸಸ್ ಡಿಕೆ ಶಿವಕುಮಾರ್ ಕುಟುಂಬದ ಮಧ್ಯೆ ಕಳೆದ ಹಲವು ವರ್ಷಗಳಿಂದ ಒಕ್ಕಲಿಗ ನಾಯಕತ್ವಕ್ಕೆ ತೆರೆಮರೆಯ ಪೈಪೋಟಿ ನಡೆಯುತ್ತಲೆ ಇತ್ತು. ಇದೀಗ ವಿಡಿಯೋ ಪ್ರಕರಣದ ಬಳಿಕ ಅದು ಬಹಿರಂಗವಾಗಿದೆ. ರಾಜ್ಯ ರಾಜಕಾರಣದಲ್ಲಿ ಎರಡು ಕುಟುಂಬಗಳ ನಡುವಿನ ಹೋರಾಟ ಮುಂದಿನ ದಿನಗಳಲ್ಲಿ ನಿರ್ಣಾಯಕ ತಿರುವು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ