Search

R ASHOK: ಚುನಾವಣೆಗೆ ಖರ್ಚು ಮಾಡಲು ಬರ ಪರಿಹಾರವನ್ನು ಇಟ್ಟುಕೊಂಡ ಕಾಂಗ್ರೆಸ್‌ ಸರ್ಕಾರ: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಂಗಳೂರು: ಚುನಾವಣೆಗೆ ಖರ್ಚು ಮಾಡಲು ಹಾಗೂ ಗ್ಯಾರಂಟಿಗಾಗಿ ಕಾಂಗ್ರೆಸ್‌ ಸರ್ಕಾರ ಬರ ಪರಿಹಾರವನ್ನು ತಡೆ ಹಿಡಿದುಕೊಂಡಿದೆ. ಇದನ್ನು ಕೂಡಲೇ ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾಯಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲದ ಪರಿಹಾರ ವಿತರಣೆಯಲ್ಲಿ ಕಾಂಗ್ರೆಸ್‌ ಸರ್ಕಾರ ರಾಜಕೀಯ ಮಾಡುತ್ತಾ ಕಟುಕನಂತೆ ವರ್ತಿಸುತ್ತಿದೆಯೇ ಹೊರತು ಕಾಳಜಿ ತೋರುತ್ತಿಲ್ಲ. ಜಾಹೀರಾತು ನೋಡಿ ರಾಜಕೀಯ ಮಾಡುವುದನ್ನು ಬಿಟ್ಟರೆ ರೈತರ ಸಂಕಷ್ಟಕ್ಕೆ ಮಿಡಿಯುವ ಕೆಲಸ ಮಾಡಿಲ್ಲ. ಕಾಂಗ್ರೆಸ್‌ ನಾಯಕರ ಯೋಗ್ಯತೆಗೆ ಒಂದು ರೂಪಾಯಿ ಬರ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ಪರಿಹಾರ ನೀಡಿದ್ದರೂ ಅದನ್ನು ರೈತರಿಗೆ ಕೊಡದೆ ಗ್ಯಾರಂಟಿಗೆ ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿಯೇ ಪರಿಹಾರ ವಿತರಣೆಗೆ ವಿಳಂಬ ಮಾಡಲಾಗಿದೆ ಎಂದರು.

ರೈತರು ಪರಿಹಾರ ಕೇಳಿದರೆ ನಿಮ್ಮ ಮನೆಯ ಹೆಂಗಸರಿಗೆ 2 ಸಾವಿರ ರೂಪಾಯಿ ಕೊಡಲಿಲ್ಲವೇ ಎಂದು ಶಾಸಕರು ಅಹಂಕಾರದಿಂದ ಮಾತಾಡುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ನೇತೃತ್ವದಲ್ಲಿ ಕೂಡಲೇ ಟಾಸ್ಕ್‌ಫೋರ್ಸ್‌ ರಚನೆ ಮಾಡಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ರಾಜ್ಯಾದ್ಯಂತ ಜಾನುವಾರುಗಳಿಗೆ ಮೇವಿನ ಕೊರತೆ ಕಂಡುಬಂದಿದ್ದು, ಇದಕ್ಕಾಗಿ ಗೋಶಾಲೆಗಳನ್ನು ಆರಂಭಿಸಬೇಕು. ಇಲ್ಲವಾದರೆ ಎಷ್ಟು ಗೋಶಾಲೆ ಆರಂಭಿಸಿದ್ದಾರೆ ಎಂದು ಲೆಕ್ಕ ನೀಡಬೇಕು ಎಂದು ಆಗ್ರಹಿಸಿದರು.

ಬರದ ವಿಚಾರದಲ್ಲಿ ಗಂಭೀರತೆ ತೋರಿಸದ ಸಿದ್ದರಾಮಯ್ಯ ಮಜವಾದಿ ಸಿಎಂ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ಬಂದ ಬಳಿಕ ರಾಜ್ಯದಲ್ಲಿ ಬರಗಾಲ ಬಂದಿದೆ. ಈ ಜೂನ್‌ನಲ್ಲಾದರೂ ಮಳೆ ಬರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ಬರಗಾಲದಲ್ಲಿ ಗೊಬ್ಬರ ಸಂಗ್ರಹ ಎಷ್ಟಿದೆ ಎಂದು ಸರ್ಕಾರ ತಿಳಿಸಬೇಕು. ಆದರೆ ಮುಂಗಾರು ಮಳೆ ಬರುತ್ತೆಯೋ ಇಲ್ಲವೋ ಎಂಬ ಜ್ಞಾನವೂ ಮುಖ್ಯಮಂತ್ರಿಗಿಲ್ಲ. ಕೃಷಿ ಸಚಿವರು ಈ ಕುರಿತು ಸಭೆಗಳನ್ನೇ ನಡೆಸಿಲ್ಲ. 5,000 ಕೋಟಿ ರೂ. ಬರ ನಿರ್ವಹಣೆಗೆ ಇಡುತ್ತೇನೆ ಎಂದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಆದರೆ ನಯಾಪೈಸೆಯೂ ಕಾಣುತ್ತಿಲ್ಲ ಎಂದು ದೂರಿದರು.

ಬಡ್ಡಿ ವ್ಯಾಪಾರಿ ಅಧಿಕಾರಿಗಳು

ಕಾಂಗ್ರೆಸ್‌ ಸರ್ಕಾರ ರೈತರಿಗೆ ನೀಡಿದ 2,000 ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡಿದ ಪರಿಹಾರದ ಮೊತ್ತದಲ್ಲಿ ಕಡಿತಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ಮಾನವೀಯತೆ ಇಲ್ಲದೆ ಮೀಟರ್‌ ಬಡ್ಡಿ ವ್ಯಾಪಾರಿಗಳಂತೆ ವರ್ತಿಸುತ್ತಿದ್ದಾರೆ. ಆ ಹಣವನ್ನು ವಾಪಸ್‌ ಕೇಳಲು ಸರ್ಕಾರಕ್ಕೆ ನಾಚಿಕೆಯಾಗಬೇಕು. ಬಿಜೆಪಿ ಸರ್ಕಾರ ದುಪ್ಪಟ್ಟು ಪರಿಹಾರ ನೀಡಿತ್ತು. ಆ ಹಣವನ್ನು ಯಾವುದೇ ಕಾರಣಕ್ಕೂ ಕಡಿತ ಮಾಡಬಾರದು ಎಂದು ಒತ್ತಾಯಿಸಿದರು.

ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗೆ ಕೂಡಲೇ ಹಣ ವರ್ಗಾವಣೆ ಮಾಡಬಹುದು. ಆದರೆ ಇನ್ನೂ ಸರ್ಕಾರ ವಿಳಂಬ ಮಾಡುತ್ತಿದೆ. ಹಣವನ್ನು ತನ್ನಲ್ಲೇ ಇಟ್ಟುಕೊಳ್ಳಲು ಸರ್ಕಾರ ಈ ರೀತಿ ತಡ ಮಾಡುತ್ತಿದೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸುತ್ತೇನೆ ಎಂದರು.

ಹಿಂದುಳಿದ ವರ್ಗಕ್ಕೆ ಅನ್ಯಾಯ

ಹಿಂದುಳಿದ ವರ್ಗಗಳ ಪರ ಮೊಸಳೆ ಕಣ್ಣೀರು ಹಾಕುವ ಕಾಂಗ್ರೆಸ್‌ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಿದೆ. ದೇವರಾಜ ಅರಸು ನಿಗಮಕ್ಕೆ ಬಿಜೆಪಿ 190 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್‌ ಸರ್ಕಾರ 100 ಕೋಟಿ ರೂ. ಗೆ ಇಳಿಸಿದೆ. ಮರಾಠ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 100 ಕೋಟಿ ರೂ. ನೀಡಿದರೆ ಕಾಂಗ್ರೆಸ್‌ 50 ಕೋಟಿ ರೂ. ನೀಡಿದೆ. ಅಂಬಿಗರ ಚೌಡಯ್ಯ ನಿಗಮಕ್ಕೆ ಬಿಜೆಪಿ 25 ಕೋಟಿ ರೂ. ನೀಡಿದ್ದು, ಕಾಂಗ್ರೆಸ್‌ ಸರ್ಕಾರ ಅದನ್ನೂ ಅರ್ಧಕ್ಕಿಳಿಸಿದೆ. ವೀರಶೈವ ನಿಗಮಕ್ಕೆ ಬಿಜೆಪಿ 100 ಕೋಟಿ ರೂ. ನೀಡಿದ್ದರೆ, ಅದನ್ನು ಕಾಂಗ್ರೆಸ್‌ 60 ಕೋಟಿ ರೂ. ಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್‌ ಗಾಂಧಿಯನ್ನು ಕೇರಳದ ಸಿಎಂ ಅಮೂಲ್‌ ಬೇಬಿ ಎಂದಿದ್ದಾರೆ. ಆದ್ದರಿಂದ ಅಲ್ಲಿಂದ ಬಂದು ಮಿಂಚಿನ ಓಟ ಮಾಡಿದ ರಾಹುಲ್‌ ರಾಯ್‌ಬರೇಲಿಗೆ ಬಂದಿದ್ದಾರೆ. ಕಾಂಗ್ರೆಸ್‌ ನಾಯಕರಿಗೆ ಮೋದಿ ಎಂದರೆ ಭಯವಿದೆ ಎಂದರು.

More News

You cannot copy content of this page