ಪುಣೆ: ಮಕ್ಕಳಿಗೆ ಇದೀಗ ಬೇಸಿಗೆ ರಜೆ. ರಜೆಯ ವೇಳೆ ಹೆಚ್ಚಿನ ಮಕ್ಕಳು ತಮ್ಮ ನೆಚ್ಚಿನ ಕ್ರೀಡೆ ಕ್ರಿಕೆಟ್ ಆಟದಲ್ಲಿ ನಿರತರಾಗಿದ್ದಾರೆ. ಒಂದೇ ಮೈದಾನದಲ್ಲಿ ಹಲವು ಕ್ರಿಕೆಟ್ ತಂಡಗಳು ಏಕಕಾಲಕ್ಕೆ ಆಡುತ್ತಿವೆ. ಬೆಂಗಳೂರಿನಂತಹ ಮಹಾನಗರದಲ್ಲಿ ಇದು ಸಾಮಾನ್ಯವಾಗಿದೆ. ಕೆಲವೊಮ್ಮೆ ಇದು ದುರಂತಕ್ಕೆ ಕಾರಣವಾಗುತ್ತಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ಕ್ರಿಕೆಟ್ ಆಟದ ವೇಳೆ ದುರಂತ ಸಂಭವಿಸಿದೆ. ಪುಣೆ ಸಮೀಪದ ಲೋಹೆಗಾಂವ್ ಬಳಿ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.
ಶೌರ್ಯ ಯಾನೆ ಶಂಭು ಕಾಳಿದಾಸ್ ಎಂಬ 11 ವರ್ಷದ ಬಾಲಕ ಕ್ರಿಕೆಟ್ ಆಡುತ್ತಿದ್ದಾಗ ವೇಗವಾಗಿ ಬಂದ ಬಾಲ್ ಆತನ ಮರ್ಮಾಂಗಕ್ಕೆ ಬಿದ್ದ ಕಾರಣ ಬಾಲಕ ಮೃತಪಟ್ಟಿದ್ದಾನೆ.
ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕ್ರಿಕೆಟ್ ಮಕ್ಕಳ ಅಚ್ಚುಮೆಚ್ಚಿನ ಆಟ. ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ದುರಂತ ಹೇಗೆ ಸಂಭವಿಸಲಿದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ.
ಚಿಕ್ಕ ಮಕ್ಕಳು ಅತೀ ಹೆಚ್ಚು ಭಾರ ಇರುವ ಬಾಲ್‌ಗಳನ್ನು ಬಳಸುತ್ತಾರೆ. ಇಂತಹ ಬಾಲ್‌ಗಳು ದೇಹದ ಸೂಕ್ಷ್ಮ ಭಾಗಕ್ಕೆ ಅಪ್ಪಳಿಸಿದರೆ ಅನಾಹುತ ಕಟ್ಟಿಟ್ಟ ಬುತ್ತಿ.
ಪೋಷಕರು ಕೂಡ ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು. ಮಗು ಕ್ರಿಕೆಟ್ ಆಡಲು ಹೋಗಿದ್ದಾನೆ ಎಂದು ನೆಮ್ಮದಿಯಿಂದ ಇರಬಾರದು. ಆಟದಲ್ಲಿ ಯಾವ ಬಾಲ್ ಬಳಸುತ್ತಾನೆ, ಯಾರ ಜೊತೆ ಕ್ರಿಕೆಟ್ ಆಡುತ್ತಾನೆ ಎಂಬ ಬಗ್ಗೆ ಗಮನ ಹರಿಸಬೇಕು
ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೇ ಮಾತ್ರ ಅಪಾಯ ತಪ್ಪಿಸಲು ಸಾಧ್ಯ