ಮೈಸೂರು: ರಾಜ್ಯದಲ್ಲಿ ಇಂದು ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಮೈಸೂರು ಸಮೀಪದ ಸಾಲಿಗ್ರಾಮದ ಬಳಿ ಸರ್ಕಾರಿ ಬಸ್ ಮಗುಚಿ ಬಿದ್ದಿದೆ. ಬಸ್‌ನ ಸ್ಟೇರಿಂಗ್ ಕಟ್ ಆದ ಪರಿಣಾಮ ಬಸ್ ಗದ್ದೆಗೆ ಉರುಳಿ ಬಿದ್ದಿದೆ. ಬಸ್‌ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅಪಘಾತದಲ್ಲಿ 30ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಅವರಲ್ಲಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ. ಕೇರಳಾಪುರದಿಂದ ಸಾಲಿಗ್ರಾಮ, ಚುಂಚನಕಟ್ಟೆ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ವೇಳೆ ಬಸ್ ಅಪಘಾತಕ್ಕೆ ಗುರಿಯಾಗಿದೆ. ಗಾಯಗೊಂಡವರನ್ನು ಕೆ. ಆರ್. ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಕೆ. ಆರ್. ನಗರ ಡಿಪೋಗೆ ಸೇರಿದ ಬಸ್ ಅಪಘಾತಕ್ಕೀಡಾಗಿದ್ದು, ತನಿಖೆಗೆ ಆದೇಶ ನೀಡಲಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಕೆ ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸರ್ಕಾರಿ ಬಸ್ ಸುಸ್ಥಿತಿಯಲ್ಲಿ ಇರಲಿಲ್ಲ ಎಂಬ ದೂರು ಕೂಡ ಕೇಳಿ ಬಂದಿದೆ.
ಕೆರೆಯಲ್ಲಿ ಮುಳುಗಿ ಸಾವು

ಬೇಸಿಗೆ ಹಿನ್ನೆಲೆಯಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ನೀರು ಪಾಲಾಗಿದ್ದಾರೆ.ನಂಜನಗೂಡು ತಾಲ್ಲೂಕಿನ ಕೋಣನೂರು ಗ್ರಾಮದ ಕೆರೆಯಲ್ಲಿಈ ದುರಂತ ಸಂಭವಿಸಿದೆ.ಚಾಮರಾಜನಗರದ ರಾಮಸಮುದ್ರ ಗ್ರಾಮದ ದೊಡ್ಡ ಬೀದಿ ನಿವಾಸಿ ಗುಣಶೇಖರ್(22) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಯುವಕ. ತನ್ನ ಸ್ನೇಹಿತರ ಜೊತೆ ಕೆರೆಗೆ ಈಜಾಡಲು ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಕಪಿಲಾ ನದಿಯಿಂದ ಕೆರೆಗೆ ನೀರು ಹರಿಯುತ್ತಿದ್ದು ಕೆರೆಯಲ್ಲಿ ಹೆಚ್ಚಿನ ನೀರಿನ ಪ್ರಮಾಣ ಇದೆ. ಈ ಸಂಬಂಧ
ಕವಲಂದೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಪಿಎಸ್ಐ ಕೃಷ್ಣಕಾಂತ ಕೋಳಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.