Search

Ed Raids In Ranchi: ಜಾರ್ಖಂಡ್‌ನಲ್ಲಿ ಇಡಿ ದಾಳಿಯಲ್ಲಿ 20ಕೋಟಿಗೂ ಅಧಿಕ ರೂ. ಪತ್ತೆ, ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ರಾಂಚಿ: ಲೋಕಸಭೆಯ ಚುನಾವಣಾ ಪ್ರಚಾರ ಮುಗಿಲು ಮುಟ್ಟಿರುವಂತೆಯೇ ಕಾರ್ಯಾಚರಣೆ ಆರಂಭಿಸಿರುವ ಜಾರಿ ನಿರ್ದೇಶನಾಲಯ , ಇಡಿ ಜಾರ್ಖಂಡ್‌ನಲ್ಲಿ ಭರ್ಜರಿ ಭೇಟೆಯಾಡಿದೆ. ಕಾಂಗ್ರೆಸ್ ಮುಖಂಡ ಹಾಗೂ ಗ್ರಾಮೀಣಾಭಿವೃದ್ದಿ ಸಚಿವರಾಗಿರುವ ಅಲಾಂಗಿರ್ ಅಲಾಂ ಆಪ್ತ ಸಹಾಯಕನ ಮನೆ ಮೇಲೆ ದಾಳಿ ನಡೆಸಿದೆ. ಒಂದಲ್ಲ, ಎರಡಲ್ಲ 20 ಕೋಟಿ ರೂ. ಹೆಚ್ಚು ಹಣವನ್ನು ಜಾರಿ ನಿರ್ದೇಶನಾಲಯ ವಶಕ್ಕೆ ತೆಗೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಬಳಿಯಿಂದ ವಶಪಡಿಸಿಕೊಂಡ ಬೃಹತ್ ಮೊತ್ತ ಇದಾಗಿದೆ ಎಂದು ಹೇಳಲಾಗುತ್ತಿದೆ.

ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಇಡಿ ಅದರ ಭಾಗವಾಗಿ ತನಿಖೆ ನಡೆಸಿದೆ. 2023, ಏಪ್ರಿಲ್ ತಿಂಗಳಲ್ಲಿ ಗ್ರಾಮೀಣಾಭಿವೃದ್ದಿ ಇಲಾಖೆಯ ಮುಖ್ಯ ಎಂಜಿನಿಯರ್ ಆಗಿದ್ದ ವಿರೇಂದ್ರ ಎಂಬವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಅಕ್ರಮ ಸಂಪತ್ತು ಪತ್ತೆಯಾಗಿತ್ತು. ಇದೀಗ ಅದರ ಮುಂದಿನ ಭಾಗವಾಗಿ ಇಡಿ ದಾಳಿ ಮುಂದುವರಿಸಿದೆ.
ಅಲಾಂಗಿರ್ ಅಲಾಂ ಕಾಂಗ್ರೆಸ್ ಮುಖಂಡರಾಗಿದ್ದು, ಗಾಂಧಿ ಪರಿವಾರಕ್ಕೆ ಆಪ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಚುನಾವಣೆ ಹೊಸ್ತಿಲಲ್ಲಿ ಇಷ್ಟು ಬೃಹತ್ ಪ್ರಮಾಣದಲ್ಲಿ ಹಣ ವಶ ಪಡಿಸಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಟಾಕ್ ವಾರ್‌ಗೆ ಕಾರಣವಾಗಿದೆ. ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಇದು ನಿರ್ದಶನ ಎಂದು ಬಿಜೆಪಿ ಆರೋಪಿಸಿದೆ. ಈ ಮಧ್ಯೆ ಚುನಾವಣಾ ಪ್ರಚಾರದಲ್ಲಿ ಕೂಡ ಪ್ರಧಾನಿ ಮೋದಿ ಇಡಿ ದಾಳಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ.
ದಾಳಿ ಹಗರಣದ ಮೊದಲ ಆರೋಪಿ ಕಾಂಗ್ರೆಸ್ ಮೊದಲ ಕುಟುಂಬದ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ರಾಹುಲ್, ಸೋನಿಯಾ ಗಾಂಧಿ ಹೆಸರು ಹೇಳದೆ ಪ್ರಧಾನಿ ಮೋದಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ಇದೇ ವೇಳೆ ರಾಮಮಂದಿರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂುದುವರಿಸಿದ್ದಾರೆ. ಭಾನುವಾರ ಅಯೋಧ್ಯೆಯಲ್ಲಿ ಬಾಲ ರಾಮನ ದರ್ಶನ ಮಾಡಿರುವ ಪ್ರಧಾನಿ ಮೋದಿ, ಇದೀಗ ಮಂದಿರ ವಿವಾದ ಮುಂದಿಟ್ಟುಕೊಂಡು ಕಾಂಗ್ರೆಸ್ ನಿಲುವನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ವಕ್ತಾರರಾಗಿರುವ ರಾಧಿಕಾ ಖೇರ್ ಅವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿಯನ್ನು ಮೋದಿ ಪ್ರಸ್ತಾಪಿಸಿದ್ದಾರೆ. ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ರಾಧಿಕಾ ಖೇರ್ ಅವರನ್ನು ಕಾಂಗ್ರೆಸ್ ಅವಹೇಳನ ಮಾಡಿತ್ತು ಎಂದು ಮೋದಿ ಆರೋಪಿಸಿದ್ದಾರೆ.
ರಾಧಿಕಾ ಖೇರ್ ಕೂಡ ಇಂದು ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ಕಾಂಗ್ರೆಸ್ ತನ್ನನ್ನು ನಿರ್ಲಕ್ಷಿಸಿತ್ತು . ಅವಮಾನಕರ ರೀತಿಯಲ್ಲಿ ನಡೆಸಿಕೊಂಡಿತ್ತು ಎಂದು ರಾಧಿಕಾ ಆರೋಪಿಸಿದ್ದಾರೆ.
ಚುನಾವಣೆಯ ಕಾವು ಏರುತ್ತಿರುವಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ರಾಮಮಂದಿರ ಸುತ್ತಮುತ್ತ ಆರೋಪ ಪ್ರತ್ಯಾರೋಪ ತೀವ್ರಗೊಂಡಿದೆ

More News

You cannot copy content of this page