ಬೆಂಗಳೂರು: ಹಾಸನದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಲಿಂಗಾಯತರನ್ನು ಟಾರ್ಗೆಟ್ ಮಾಡಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ಒಕ್ಕಲಿಗರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗುವುದರಲ್ಲಿ ಕಾಂಗ್ರೆಸ್ ಸಂಚಿದೆ ಎಂದು ಅಶೋಕ್ ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ತನಿಖೆಗೆ ರಚಿಸಿರುವ ಎಸ್ ಐಟಿ ಬಗ್ಗೆ ಕೂಡ ಅಶೋಕ್ ಲೇವಡಿ ಮಾಡಿದ್ದಾರೆ. ಇದು ತ್ರಿಬಲ್ ಎಸ್‌ಐಟಿ ಎಂದು ಟೀಕಿಸಿದ್ದಾರೆ. ಸುರ್ಜೇವಾಲಾ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಎಸ್ಐಟಿ ಎಂದು ಅಶೋಕ್ ಕುಟುಕಿದ್ದಾರೆ. ಸ್ಕ್ರಿಪ್ಟ್ ರೈಟರ್ ಸುರ್ಜೇವಾಲಾ, ಡೈರೆಕ್ಷನ್ ಸಿದ್ದರಾಮಯ್ಯ, ಪ್ರೊಡ್ಯೂಸರ್ ಡಿಕೆಶಿ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಇದೀಗ ಒಕ್ಕಲಿಗರನ್ನು ಟಾರ್ಗೆಟ್ ಮಾಡುತ್ತಿದೆ. ಹಾಸನದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಲಕ್ಷ ಪೆನ್ ಡ್ರೈವ್‌ಗಳನ್ನು ಹಂಚಲಾಗಿದೆ. ರಾಜ್ಯ ಸರ್ಕಾರವೇ ಒಂದು ಲಕ್ಷ ಪೆನ್ ಡ್ರೈವ್ ಹಂಚಿರುವಾಗ , ವಿಡಿಯೋ ಹಂಚಿದ ಯಾವ ಆರೋಪಿಗಳನ್ನು ಸರ್ಕಾರ ಬಂಧಿಸಲಿದೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾದಳದಿಂದ ನ್ಯಾಯಯುತ ತನಿಖೆ ನಡೆಯುವ ವಿಶ್ವಾಸ ಇಲ್ಲ. ರಾಜ್ಯ ಸರ್ಕಾರ ಪ್ರಕರಣದ ಕುರಿತ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಿ ಎಂದು ಅಶೋಕ್ ಆಗ್ರಹಿಸಿದ್ದಾರೆ. ಪ್ರಕರಣದಲ್ಲಿ ಕೇಳಿ ಬಂದಿರುವ ಕಾರ್ತಿಕ್ ಎಂಬ ವ್ಯಕ್ತಿ ಇದೀಗ ವಿದೇಶಕ್ಕೆ ಪರಾರಿಯಾಗಿದ್ದಾನೆ. ವಿದೇಶ ಪ್ರವಾಸದ ವೆಚ್ಚವನ್ನು ಯಾರು ಭರಿಸುತ್ತಿದ್ದಾರೆ ಎಂದು ಅಶೋಕ್ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ
ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಆರ್. ಅಶೋಕ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂದು ಅಶೋಕ್ ಹೇಳಿದ್ದಾರೆ. ಕೇರಳದಂತಹ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಟಿಯಾಗಿದೆ ಎಂದು ಆರೋಪಿಸಿರುವ ಅಶೋಕ್, ಇದೀಗ ಸರ್ಕಾರ ತನ್ನ ಆಸ್ತಿ ಮಾರಾಟಕ್ಕೆ ಮುಂದಾಗಿದೆ ಎಂದು ಟೀಕಿಸಿದ್ದಾರೆ. ಆರು ಬಿಡಿಎ ಕಾಂಪ್ಲೆಕ್ಸ್ ಗಳನ್ನು 40ರಿಂದ 50 ವರ್ಷಕ್ಕೆ ಲೀಸ್‌ಗೆ ಕೊಡಲು ಸರ್ಕಾರ ತೀರ್ಮಾನಿಸಿದೆ. ಲೀಸ್ ಅಂದರೆ ಒಂದು ರೀತಿಯ ಮಾರಾಟ. ಈ ಮೂಲಕ ಕಿಕ್ ಬ್ಯಾಕ್ ಪಡೆಯಲು ಸರ್ಕಾರ ಯತ್ನ ನಡೆಸಿದೆ ಎಂದು ಅಶೋಕ್ ಟೀಕಿಸಿದ್ದಾರೆ.
ಹೆಚ್.ಎಸ್.ಆರ್. ಲೇಔಟ್, ವಿಜಯನಗರ, ಸದಾಶಿವನಗರ, ಆರ್ ಟಿ ನಗರ, ಆಸ್ಟಿನ್ ಟೌನ್ ಬಿಡಿಎ ಕಾಂಪ್ಲೆಕ್ಸ್ ಗಳನ್ನು ಸರ್ಕಾರ ಲೀಸ್‌ಗೆ ಕೊಡಲು ಪ್ಲ್ಯಾನ್ ಮಾಡಿದೆ ಎಂದು ಅಶೋಕ್ ಟೀಕಿಸಿದ್ದಾರೆ. ಇದರಲ್ಲಿ 200 ಕೋಟಿ ರೂ ಹೆಚ್ಚು ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರದ ಆಸ್ತಿ ಮಾರಾಟಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯಪಾಲರು ತಕ್ಷಣ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ