ಬೆಂಗಳೂರು: ಹಾಸನ ಜಿಲ್ಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ಹಂಚಿದ ಪಿತೂರಿ ಆರೋಪಕ್ಕೆ ಗುರಿಯಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಒತ್ತಾಯ ಮಾಡಿದ್ದಾರೆ.
ಜೆಡಿಎಸ್ ಕಚೇರಿ ಜೆಪಿ ಭವನದ ಬಳಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿ ಮಾತನಾಡಿದ ಅವರು; ಅಶ್ಲೀಲ ವಿಡಿಯೋಗಳನ್ನು ಯಾರು ಸೋರಿಕೆ ಮಾಡಿದರು ಎನ್ನುವ ಅಂಶವನ್ನು ಬಿಜೆಪಿ ನಾಯಕ, ವಕೀಲ ದೇವರಾಜ್ ಗೌಡ ಅವರು ಬಹಿರಂಗ ಮಾಡಿದ್ದಾರೆ. ಅವರು ನೇರವಾಗಿಯೇ ಸಾಕ್ಷಿ ಸಮೇತ ಡಿಕೆಶಿ ಹೆಸರು ಹಾಗೂ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಅವರ ಹೆಸರನ್ನು ಹೇಳಿದ್ದಾರೆ ಎಂದರು.
ಇಷ್ಟು ಸೂಕ್ಷ್ಮ ಪ್ರಕರಣದ ಬಗ್ಗೆ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದ ಉಪ ಮುಖ್ಯಮಂತ್ರಿ, ರಾಜಕೀಯ ಸ್ವಾರ್ಥಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು, ಅದಕ್ಕಾಗಿ ಜೆಡಿಎಸ್ ಬಿಜೆಪಿ ಮೈತ್ರಿಗೆ ಧಕ್ಕೆ ಉಂಟು ಮಾಡುವ ಏಕೈಕ ಉದ್ದೇಶದಿಂದ ಈ ಸಂಚು ನಡೆಸಿದ್ದಾರೆ. ಹೀಗಾಗಿ ಅವರನ್ನು ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಫಲಕ ಹಿಡಿದು ಪ್ರತಿಭಟನೆ
ಜೆಡಿಎಸ್ ಕಾರ್ಯಕರ್ತರು ಡಿಕೆಶಿ ವಿರುದ್ಧ ನಾಮಫಲಕ ಹಿಡಿದು ಪ್ರತಿಭಟನೆ ನಡೆಸಿದರು. ಪಕ್ಷದ ನೂರಾರು ಮಹಿಳಾ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.