ಬೆಂಗಳೂರು: ಮುಖ್ಯವಾಗಿ ಉತ್ತರಕರ್ನಾಟಕದಲ್ಲಿ ವ್ಯಾಪಿಸಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮುಂಜಾನೆಯಿಂದಲೇ ಮತದಾನ ಆರಂಭವಾಗಿದೆ. ಇದುವರೆಗೆ ಶಾಂತಿಯುತ ಮತದಾನವಾಗಿದೆ. ಮುಂಜಾನೆ 9 ಗಂಟೆ ತನಕ ರಾಜ್ಯದಲ್ಲಿ ಶೇಕಡ 9.45 ಶೇಕಡ ಮತದಾನವಾಗಿದೆ. ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದಾಖಲೆ ಪ್ರಮಾಣದ ಮತದಾನದ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಯಡಿಯೂರಪ್ಪ ಪುತ್ರ ರಾಘವೇಂದ್ರ ಸ್ಪರ್ಧಾಕಣದಲ್ಲಿರುವ ಪ್ರಮುಖರಾಗಿದ್ದಾರೆ. ಅಂಜಲಿ ನಿಂಬಾಳ್ಕರ್ ಸಹಿತ ಹಲವು ಮಂದಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷಿಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಮತ್ತೊಮ್ಮೆ ಕಣಕ್ಕೆ ಧುಮುಕಿದ್ದಾರೆ. ಗೀತಾ ಶಿವರಾಜ್ ಕುಮಾರ್ ಪರವಾಗಿ ಅವರ ಪತಿ ಹಾಗೂ ಚಿತ್ರ ನಟ ಶಿವರಾಜ್ ಕುಮಾರ್ ಬಿರುಸಿನ ಪ್ರಚಾರ ನಡೆಸಿದ್ದಾರೆ. ಕನ್ನಡ ಚಿತ್ರರಂಗದ ಹಲವು ನಟ ನಟಿಯರು ಪಕ್ಷಾತೀತವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದರು.
ಬೊಮ್ಮಾಯಿ, ಜಗದೀಶ್ ಶೆಟ್ಟರ್, ಮಲ್ಲಿಕಾರ್ಜುನ ಖರ್ಗೆ, ಕಾಗೋಡು ತಿಮ್ಮಪ್ಪ, ರಮೇಶ್ ಜಾರಕಿಹೊಳಿ ತಮ್ಮ ಸಂವಿಧಾನಿಕ ಹಕ್ಕು ಚಲಾಯಿಸಿದ್ದಾರೆ. ಮತದಾನ ಮಾಡಿದ ಬಳಿಕ ಎಲ್ಲ ನಾಯಕರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಸಿಲಿನ ಝಳದ ಮಧ್ಯೆ ಉತ್ತರ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದೆ.
ಮಧ್ಯಾಹ್ನ ಮತದಾನ ಸ್ವಲ್ಪ ಇಳಿಮುಖವಾಗುವ ಸಾಧ್ಯತೆ ಇದ್ದು, ಮಧ್ಯಾಹ್ನದ ಬಳಿಕ ವೇಗ ಪಡೆದುಕೊಳ್ಳಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆೆಗಾಗಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಬಿಜೆಪಿ ಎರಡನೆ ಹಂತದ ಚುನಾವಣೆಯಲ್ಲಿ ಹೆಚ್ಚಿನ ವಿಶ್ವಾಸ ಇರಿಸಿಕೊಂಡಿದೆ. ಉತ್ತಮ ಸಾಧನೆಯ ನಂಬಿಕೆ ಹೊಂದಿದೆ.
ಚುನಾವಣಾ ಕಾರ್ಯಕ್ಕೆ ಸರ್ಕಾರಿ ಬಸ್ ಬಳಸಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ಸಾರಿಗೆ ವ್ಯವಸ್ಥೆ ಹಳಿತಪ್ಪಿದೆ. ಚುನಾವಣಾ ಫಲಿತಾಂಶ ಜೂನ್ 4ಕ್ಕೆ ಪ್ರಕಟವಾಗಲಿದೆ.