ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬಿಜೆಪಿ ನಾಯಕ ಹಾಗೂ ವಕೀಲ ದೇವರಾಜೇಗೌಡ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿರುವ ಬೆನ್ನಲ್ಲೇ ಬೆಂಗಳೂರಿನ ವಿವಿಧೆಡೆ ಡಿ ಕೆ ಶಿವಕುಮಾರ್ ವಿರುದ್ಧದ ಪೋಸ್ಟರ್‌ಗಳು ಪ್ರತ್ಯಕ್ಷವಾಗಿವೆ. ಹೆಣ್ಣು ಮಕ್ಕಳನ್ನು ರಾಜಕೀಯವಾಗಿ ಬಳಸಿಕೊಳ್ಳುವ ಹುನ್ನಾರ ಎಂಬ ರೀತಿಯ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನ ಪೋಸ್ಟರ್‌ಗಳು ಕಂಡು ಬಂದಿವೆ. ಲುಲು ಮಾಲ್, ಕೆಪಿಸಿಸಿ ಕಚೇರಿ ಸುತ್ತಮುತ್ತ ಡಿಕೆಶಿ ಕುರಿತಾದ ಪೋಸ್ಟರ್‌ಗಳು ಕಂಡು ಬಂದಿವೆ.
ಇದೀಗ ಡಿ ಕೆ ಶಿವಕುಮಾರ್ ವಿರುದ್ಧ ಪ್ರತಿಭಟನೆಗೆ ಜೆಡಿಎಸ್ ಸಿದ್ದತೆ ನಡೆಸಿರುವ ಹಿನ್ನೆಲೆಯಲ್ಲಿ ಸದಾಶಿವನಗರದಲ್ಲಿರುವ ಡಿ ಕೆ ಶಿವಕುಮಾರ್ ನಿವಾಸಕ್ಕೆ ಬಿಗಿ ಭದ್ರತೆ ನೀಡಲಾಗಿದೆ. ಭದ್ರತೆ ಹೆಚ್ಚಿಸಲಾಗಿದೆ. ಚಿಕ್ಕಮಗಳೂರಿಗೆ ಪ್ರವಾಸಕ್ಕೆ ತೆರಳಬೇಕಿದ್ದ ಡಿಕೆಶಿ ತಮ್ಮ ಪ್ರವಾಸ ಮುಂದೂಡಿದ್ದಾರೆ.
ಹಾಸನ ಮತ್ತು ಮಂಡ್ಯದಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದೆ. ಹಾಸನದ ಪ್ರಮುಖ ಬೀದಿಗಳಲ್ಲಿ ಜೆಡಿಎಸ್ ಮಾನವ ಸರಪಳಿ ನಿರ್ಮಿಸಿದೆ. ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.
ನಾಳೆಯಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಜೆಡಿಎಸ್ ಘೋಷಿಸಿದೆ.
ಈ ಮಧ್ಯೆ ಜಾಮೀನು ಕೋರಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಳೆಗೆ ಮುಂದೂಡಿದೆ. ರೇವಣ್ಣ ಪರ ಹಿರಿಯ ವಕೀಲ ಸಿ. ವಿ. ನಾಗೇಶ್ ವಾದ ಮಂಡಿಸಿದ್ದಾರೆ. ಅಂತಿಮವಾಗಿ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.