ನವದೆಹಲಿ: ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದ ಬಳಿಕ ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಹುಡುಕಿಕೊಡುವಂತೆ ರಾಜ್ಯ ವಿಶೇಷ ತನಿಖಾ ದಳ ಮಾಡಿರುವ ಮನವಿಗೆ ಇಂಟರ್‌ಪೋಲ್ ಸ್ಪಂದಿಸಿದೆ. ಸಿಬಿಐ ಮೂಲಕ ಇಂಟರ್‌ಪೋಲ್, ಎಸ್‌ಐಟಿಗೆ ಪ್ರತ್ಯುತ್ತರ ನೀಡಿದೆ. ವಿಶೇಷ ತನಿಖಾ ದಳ ಮಾಡಿರುವ ಮನವಿ ಪುರಸ್ಕರಿಸಿ 196 ದೇಶಗಳಿಗೆ ಮಾಹಿತಿ ನೀಡಲಾಗಿದೆ. ಎಲ್ಲ ವಿಮಾನ ನಿಲ್ದಾಣಗಳಲ್ಲಿ, ಬಂದರುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಇಂಟರ್ ಪೋಲ್, ರಾಜ್ಯದ ಎಸ್ಐಟಿಗೆ ಸಿಬಿಐ ಮೂಲಕ ಉತ್ತರ ನೀಡಿದೆ.
ಪ್ರಜ್ವಲ್ ರೇವಣ್ಣ ಕುರಿತು ಸಣ್ಣ ಮಾಹಿತಿ ದೊರೆತರೂ ಅದನ್ನು ರವಾನಿಸುವಂತೆ ಇಂಟರ್ ಪೋಲ್ ಸದಸ್ಯ ರಾಷ್ಟ್ರಗಳಿಗೆ ಸೂಚನೆ ನೀಡಿದೆ. ಪ್ರಜ್ವಲ್ ರೇವಣ್ಣ ಪತ್ತೆಗೆ ಎಸ್‌ಐಟಿ ಈಗಾಗಲೇ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ. ಬ್ಲೂ ಕಾರ್ನರ್ ನೋಟಿಸ್ ಕೂಡ ನೀಡಿದೆ.
ಸಿಎಂ, ಡಿಸಿಎಂ ಪೋಸ್ಟರ್ – ಪ್ರಕರಣ ದಾಖಲು
ಇನ್ನೊಂದೆಡೆ ಬೆಂಗಳೂರು ನಗರದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ವಿರುದ್ಧ ಪೋಸ್ಟರ್ ಅಂಟಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಾಗಡಿ ರಸ್ತೆಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಕೆಪಿಸಿಸಿ ಕಚೇರಿ ಹಾಗೂ ಲುಲು ಮಾರ್ಕೆಟ್ ಪರಿಸರದಲ್ಲಿ ಅಶ್ಲೀಲ ಪೋಸ್ಟರ್‌ಗಳನ್ನು ಅನಾಮಧೇಯರು ಅಂಟಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದೇ ವೇಳೆ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಾನೂನು ಘಟಕ ವಿಶೇಷ ತನಿಖಾ ದಳಕ್ಕೆ ದೂರು ನೀಡಿದೆ. ಅಶ್ಲೀಲ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜೆಡಿಎಸ್ ಕಾನೂನು ಘಟಕ ಆಗ್ರಹಿಸಿದೆ.ವಕೀಲ ಎ.ಪಿ.ರಂಗನಾಥ್ ನೇತೃತ್ವದಲ್ಲಿ ದೂರು ನೀಡಲಾಗಿದೆ.
ಸಂತ್ರಸ್ತೆಯರ ಮುಖ ಬ್ಲರ್ ಮಾಡದೆ ವಿಡಿಯೋ ವೈರಲ್ ಮಾಡಲಾಗಿದೆ. ಇದು ಗಂಭೀರವಾದ ಪ್ರಕರಣವಾಗಿದೆ. ಈ ಸಂಬಂದ ವಿಶೇಷ ತನಿಖಾ ದಳ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜೆಡಿಎಸ್ ಕಾನೂನು ಘಟಕ ಅಧಿಕಾರಿಗಳಿಗೆ ಮನವಿ ಮಾಡಿದೆ