ಬೆಂಗಳೂರು: ರಾಜ್ಯದಲ್ಲಿ ಮತದಾನ ಪರ್ವ ಮುಗಿಯುತ್ತಿರುವಂತೆಯೇ ಬಿಜೆಪಿ- ಜೆಡಿಎಸ್ ನಡುವಿನ ರಾಜಕೀಯ ಮೈತ್ರಿ ಮುಂದುವರಿಕೆ ಕುರಿತಂತೆ ಸಂಶಯ ತಲೆದೋರಿದೆ. ಉಭಯ ಪಕ್ಷಗಳ ಮೈತ್ರಿಯ ತಳಪಾಯದಲ್ಲಿ ಬಿರುಕು ಮೂಡಿರುವ ಸೂಚನೆ ಕಾಣಿಸಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಬಿಜೆಪಿ ಜೊತೆಗಿನ ಮೈತ್ರಿ ಮುಂದುವರಿಕೆ ಕುರಿತಂತೆ ಮುಂದೆ ನೋಡೋಣ ಎಂದು ಅರ್ಥಗರ್ಭಿತವಾಗಿ ಮಾತನಾಡಿದ್ದಾರೆ. ಇದು ಸೂಚ್ಯವಾಗಿ ಬಿಜೆಪಿ ಜೊತೆಗಿನ ರಾಜಕೀಯ ಮೈತ್ರಿಯ ಅಂತ್ಯದ ಸುಳಿವು ಎಂದೇ ಹೇಳಲಾಗುತ್ತಿದೆ.
ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದ ಬಳಿಕ ಬಿಜೆಪಿ ನಾಯಕರು ಮೌನಕ್ಕೆ ಜಾರಿ ಹೋಗಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಜೆಡಿಎಸ್ ನಾಯಕನ ವರ್ತನೆಯಿಂದ ಮುಜುಗರಕ್ಕೆ ಒಳಗಾಗಿದ್ದೇವೆ ಎಂದು ಹಲವು ಬಿಜೆಪಿ ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ನಾಯಕರ ವರ್ತನೆಗಳನ್ನು ಅವಲೋಕಿಸಿದ ಬಳಿಕ ಕುಮಾರಸ್ವಾಮಿ ಬಿಜೆಪಿ ಜೊತೆಗಿನ ಮೈತ್ರಿ ಕುರಿತಂತೆ ಮೊದಲಿನ ಉತ್ಸಾಹ ಹೊಂದಿಲ್ಲ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಕೊನೆಗೊಳ್ಳಲಿದ್ದು, ಮುಂದಿನ ಒಂದು ತಿಂಗಳು ವಿಚಾರ ವಿನಿಮಯ ನಡೆಸಲು ಸಾಕಷ್ಟು ಕಾಲಾವಕಾಶ ದೊರೆಯಲಿದೆ. ಅಷ್ಟರಲ್ಲಿ ವಿಡಿಯೋ ಪ್ರಕರಣ ಕೂಡ ಒಂದೋ ಜನಮಾನಸದಿಂದ ಮರೆಯಾಗಲಿದೆ ಅಥವಾ ತಾರ್ಕಿಕ ಅಂತ್ಯ ತಲುಪಲಿದೆ ಎಂಬುದು ಜೆಡಿಎಸ್ ನಾಯಕರ ಲೆಕ್ಕಾಚಾರವಾಗಿದೆ.
ಒಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಮುಂದುವರಿಸುವ ಸಂಬಂಧ ಜೆಡಿಎಸ್ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಇದೇ ವೇಳೆ ಸುದೀರ್ಘ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮೊದಲೇ ಮಾಹಿತಿ ಇದ್ದಿದ್ದರೇ ಪ್ರಜ್ವಲ್ ರೇವಣ್ಣಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡುತ್ತಿರಲಿಲ್ಲ ಎಂದು ಘೋಷಿಸಿದ್ದಾರೆ. ದೇವೇಗೌಡರು ಹೇಳಿದ್ದರೂ ಟಿಕೆಟ್ ನೀಡುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.