ಮುಂಬೈ: ಖ್ಯಾತ ನಟ ಸಲ್ಮಾನ್ ಖಾನ್ ಮನೆ ಮುಂದೆ ನಡೆದ ಫೈರಿಂಗ್ ಕೇಸ್ ಸಂಬಂಧ ಮುಂಬೈ ಅಪರಾಧ ಪತ್ತೆದಳದ ಪೊಲೀಸರು ಐದನೇ ಆರೋಪಿಯನ್ನು ಬಂಧಿಸಿದ್ದಾರೆ. ರಾಜಸ್ತಾನದಲ್ಲಿ ಆರೋಪಿ ಮೊಹಮ್ಮದ್ ಚೌಧರಿ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಸಾಗರ್ ಪಾಲ್ , ವಿವೇಕ್ ಗುಪ್ತಾಗೆ ಆರ್ಥಿಕ ಹಾಗೂ ಇನ್ನಿತರ ನೆರವು ನೀಡಿದ ಆರೋಪದಲ್ಲಿ ಮೊಹಮ್ಮದ್ ಚೌಧರಿಯನ್ನು ಬಂಧಿಸಲಾಗಿದೆ.
ಸಲ್ಮಾನ್ ಖಾನ್ ಮನೆ ಪರಿಸರದ ಅವಲೋಕನ ಹಾಗೂ ಇನ್ನಿತರ ಕೃತ್ಯಗಳಿಗೆ ಆರೋಪಿ ಮೊಹಮ್ಮದ್ ಚೌಧರಿ ನೆರವು ನೀಡಿದ್ದ ಎಂದು ಆರೋಪಿಸಲಾಗಿದೆ.
ಆರೋಪಿ ಮೊಹಮ್ಮದ್ ಚೌಧರಿಯನ್ನು ಇದೀಗ ಮುಂಬೈಗೆ ಕರೆ ತರಲಾಗುತ್ತಿದೆ. ಕಳೆದ ವಾರ ಪ್ರಕರಣ ಸಂಬಂಧ ಪೊಲೀಸ್ ವಶದಲ್ಲಿದ್ದ ಪಂಜಾಬ್ ಮೂಲದ ಆರೋಪಿಯೊಬ್ಬ ಸಂಶಯಾಸ್ಪದವಾಗಿ ಮೃತಪಟ್ಟಿದ್ದ. ಸಲ್ಮಾನ್ ಖಾನ್ ಮನೆ ಮುಂದೆ ನಡೆದ ಫೈರಿಂಗ್ ಪ್ರಕರಣವನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ಹಿಂದೆ ನಡೆದ ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಸಲ್ಮಾನ್ ಖಾನ್ ಹಿಂದಿ ಚಿತ್ರರಂಗದ ಬಹುಬೇಡಿಕೆಯ ನಟನಾಗಿದ್ದಾನೆ. ಬಿಗ್ ಬಾಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳ ನಿರೂಪಕರಾಗಿಯೂ ಜನಮನ ಗೆದ್ದಿದ್ದಾರೆ. ವಿವಾದಗಳು ಕೂಡ ಸಲ್ಮಾನ್ ಖಾನ್ ಗೆ ಹೊಸತಲ್ಲ. ಈ ಹಿಂದೆ ಸಲ್ಮಾನ್ ಖಾನ್ ಪ್ರೇಮ ಪ್ರಕರಣ ಭಾರೀ ಸುದ್ದಿ ಮಾಡಿತ್ತು.
ಚಿತ್ರರಂಗದ ಹಲವು ನಟಿಯರ ಜೊತೆ ಸಲ್ಮಾನ್ ಖಾನ್ ಹೆಸರು ತಳುಕುಹಾಕಿಕೊಂಡಿತ್ತು.