Search

BJP Attacks On Congress: ಹಿಂದೂ ಜನಸಂಖ್ಯೆ ಕುಸಿತ : ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ನವದೆಹಲಿ: ದೇಶದಲ್ಲಿ ಹಿಂದೂಗಳ ಜನಸಂಖ್ಯೆಯಲ್ಲಿ ಭಾರೀ ಕುಸಿತವಾಗಿದೆ ಎಂಬ ವರದಿಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. 1950ರಿಂದ 2015ರ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆಯಲ್ಲಿ ಶೇಕಡ 7.8ರಷ್ಟು ಕುಸಿತವಾಗಿದೆ. ಇದೇ ವೇಳೆ ಭಾರತದಲ್ಲಿ ಅಲ್ಪ ಸಂಖ್ಯಾತರಾಗಿರುವ ಮುಸ್ಲಿಮರ ಜನಸಂಖ್ಯೆ ಶೇಕಡ 43ರಷ್ಟು ಹೆಚ್ಚಳವಾಗಿದೆ ಎಂಬ ವರದಿ ಮುಂದಿಟ್ಟು ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಅವಧಿಯಲ್ಲಿ ಕೇಂದ್ರದಲ್ಲಿ ಆಡಳಿತದಲ್ಲಿ ಇದ್ದ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಜನ ಸಂಖ್ಯೆಯಲ್ಲಿ ಉಂಟಾಗಿರುವ ಬದಲಾವಣೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಪ್ರಶ್ನೆ ಮಾಡಿದೆ.
ದೇಶದಲ್ಲಿ ಪೌರತ್ವ ಕಾಯಿದೆ ಕಾನೂನು ಜಾರಿಗೊಳಿಸಬೇಕು ಎಂಬ ಬಿಜೆಪಿ ವಾದಕ್ಕೆ ಈ ವರದಿ ಮತ್ತಷ್ಟು ಪುಷ್ಟಿ ನೀಡುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣೆಯ 4 ಹಂತಗಳು ಇನ್ನೂ ಬಾಕಿ ಇದ್ದು, ಮುಂದಿನ ದಿನಗಳಲ್ಲಿ ಜನಸಂಖ್ಯಾ ಸ್ಫೋಟ ಚುನಾವಣೆಯಲ್ಲಿ ಪ್ರಮುಖ ವಿಷಯವಾಗುವ ಸಾಧ್ಯತೆ ಇದೆ.
ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಪ್ರಮಾಣ ಇಳಿಮುಖವಾಗಿರುವುದನ್ನು ಸಂಘಪರಿವಾರ ಕೂಡ ಗಂಭೀರವಾಗಿ ಪರಿಗಣಿಸಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲು ಸಂಘ ಪರಿವಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರುವ ಸಾಧ್ಯತೆಯಿದೆ.
ಹಿಂದೂಗಳು ತಡವಾಗಿ ಮದುವೆಯಾಗುತ್ತಿರುವುದು ಪ್ರಸಕ್ತ ಸಮಸ್ಯೆಗೆ ಒಂದು ಕಾರಣ ಎನ್ನಲಾಗುತ್ತಿದೆ. ಇದರ ಜೊತೆಗೆ ಅಕ್ರಮ ವಲಸೆಗಾರರು ದೇಶದಲ್ಲಿ ಪ್ರವೇಶಿಸುತ್ತಿರುವುದು ಕೂಡ ಹಲವು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ.
ಮುಂದಿನ ದಿನಗಳಲ್ಲಿ ಹಿಂದೂಗಳ ಜನಸಂಖ್ಯೆ ಪ್ರಮಾಣ ಇಳಿಮುಖ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆ ಹೆಚ್ಚಾಗಿದೆ.

More News

You cannot copy content of this page