ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ವಿಶೇಷ ತನಿಖಾ ತಂಡ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಪ್ರಜ್ವಲ್ ರೇವಣ್ಣ ಇಂದು ಆಗಮಿಸಲಿರುವ ಸಣ್ಣ ಸುಳಿವು ತನಿಖಾ ತಂಡಕ್ಕೆ ಲಭಿಸಿದೆ ಎಂದು ಹೇಳಲಾಗಿತ್ತಿದೆ. ಈ ಹಿನ್ನೆಲೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.
ಬೆಳಗಿನಿಂದ ಕೆಐಎಬಿ ಗೆ ಬರುತ್ತಿರುವ ವಿಮಾನಗಳ ಪ್ರಯಾಣಿಕರ ಲಿಸ್ಟ್ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಎಸ್ಐಟಿ ಹಾಗೂ ಪೊಲೀಸರಿಂದ ಪರಿಶೀಲನೆ ನಡೆಸಲಾಗುತ್ತಿದೆ
ಸಿಂಗಾಪುರ ದುಬೈ,ದೋಹಾ ಸೇರಿದಂತೆ ಹಲವು ವಿಮಾನಗಳ ಪ್ರಯಾಣಿಕರ ಪಟ್ಟಿ ಪರಿಶೀಲನೆ ನಡೆಸಲಾಗಿದೆ.
ಬೆಳಗಿನಿಂದ 10 ಕ್ಕೂ ಅಧಿಕ ವಿಮಾನಗಳ ಪ್ರಯಾಣಿಕರ ಲಿಸ್ಟ್ ಪರಿಶೀಲನೆ ನಡೆಸಲಾಗಿದೆ.
ಸಂಜೆಯಿಂದ ಮಧ್ಯರಾತ್ರಿವರೆಗೂ ಬೆಂಗಳೂರಿಗೆ 30 ಕ್ಕೂ ಅಧಿಕ ಅಂತರಾಷ್ಟ್ರೀಯ ವಿಮಾನಗಳು ಬರಲಿವೆ. ಹೀಗಾಗಿ ಬೆಂಗಳೂರಿನಲ್ಲಿ ಬಂದು ಇಳಿಯುವ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ.
ಬೆಂಗಳೂರು ಹೊರತುಪಡಿಸಿ ಪಕ್ಕದ ವಿಮಾನ ನಿಲ್ದಾಣಗಳಲ್ಲಿ ಇಳಿಯುವ ಸಾಧ್ಯತೆ ಮನಗಂಡಿರುವ ಅಧಿಕಾರಿಗಳು ಹೈದರಾಬಾದ್ ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಿಗೆ ಸೂಚನೆ ನೀಡಿದ್ದಾರೆ.
ತಂದೆ ರೇವಣ್ಣ ಬಂಧನವಾಗಿರುವ ಹಿನ್ನೆಲೆಯಲ್ಲಿ ವಿಳಂಬ ಮಾಡದೆ ಪೊಲೀಸ್ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಪ್ರಜ್ವಲ್‌ಗೆ ಕುಟುಂಬ ಸದಸ್ಯರು ಸಲಹೆ ನೀಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
ಇದೇ ವೇಳೆ ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ ಮುಂದುವರಿದಿದೆ.