ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಕೊನೆಗೂ ಬಿಗ್ ರಿಲೀಫ್ ಸಿಕ್ಕಿದೆ. ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಕಳೆದ 50 ದಿನಗಳಿಂದ ಬಂಧನದಲ್ಲಿರುವ ಅರವಿಂದ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಸುದೀರ್ಘ ಕಾಲ ನಡೆದ ವಾದ ಪ್ರತಿವಾದದ ಬಳಿಕ ಅಂತಿಮವಾಗಿ ನ್ಯಾಯಾಲಯ ಅರವಿಂದ ಕೇಜ್ರಿವಾಲ್‌ಗೆ ರಿಲೀಫ್ ನೀಡಿದೆ.
ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಕೇಜ್ರಿವಾಲ ಪರ ವಕೀಲರು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಜಾರಿ ನಿರ್ದೇಶನಾಲಯ ಮಧ್ಯಂತರ ಜಾಮೀನು ಅರ್ಜಿಯನ್ನು ಬಲವಾಗಿ ವಿರೋಧಿಸಿತ್ತು. ಆದರೆ ಕಳೆದ ವಾರ ಜಾಮೀನು ನೀಡುವ ಸುಳಿವನ್ನು ಸುಪ್ರೀಂಕೋರ್ಟ್ ನೀಡಿತ್ತು.
ಇದೀಗ ಜೂನ್1ರ ವರೆಗೆ ಅರವಿಂದ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಜೂನ್2ರಂದು ನ್ಯಾಯಾಲಯದ ಮುಂದೆ ಶರಣಾಗುವಂತೆ ಆದೇಶ ನೀಡಿದೆ. ಜೂನ್4ರ ವರೆಗೆ ಅವಕಾಶ ನೀಡಬೇಕು ಎಂಬ ಕೇಜ್ರಿವಾಲ್ ವಕೀಲರ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.
ಮದ್ಯ ನೀತಿ ಹಗರಣದ ಹಿನ್ನೆಲೆಯಲ್ಲಿ ಮಾರ್ಚ್ 21ರಂದು ಅರವಿಂದ ಕೇಜ್ರಿವಾಲ್‌ರನ್ನು ಬಂಧಿಸಲಾಗಿತ್ತು. ಇದೇ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಮಾಜಿ ಸಿಎಂ ಚಂದ್ರಶೇಖರ್ ರಾವ್ ಪುತ್ರಿ ಕೆ. ಕವಿತಾ ಅವರನ್ನು ಕೂಡ ಬಂಧಿಸಲಾಗಿದೆ. ಕೆ. ಕವಿತಾ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಳ್ಳಿಹಾಕಿದೆ.