ನವದೆಹಲಿ: ಚುನಾವಣಾ ಆಯೋಗದ ಕಾರ್ಯ ವೈಖರಿ ಪ್ರಶ್ನಿಸಿ ಹೇಳಿಕೆ ನೀಡಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಸಂಬಂಧ ಚುನಾವಣಾ ಆಯೋಗ ಕೆಂಗಣ್ಣು ಬೀರಿದೆ. ಖರ್ಗೆಗೆ ಚುನಾವಣಾ ಆಯೋಗ ಛೀಮಾರಿ ಹಾಕಿದೆ.
ಖರ್ಗೆ ಹೇಳಿಕೆ ಸಕ್ರಿಯ ಚುನಾವಣಾ ಕಾರ್ಯ ನಿರ್ವಹಣೆಯ ಮೇಲಿನ ಅತಿಕ್ರಮಣ ಎಂದು ಆಯೋಗ ಟೀಕಿಸಿದೆ.
ಆಧಾರರಹಿತ ಆರೋಪ ಅದರಲ್ಲೂ ಚುನಾವಣೆಯ ಮಧ್ಯದಲ್ಲಿ ಈ ರೀತಿಯ ವರ್ತನೆ ಮತದಾರರಲ್ಲಿ ಗೊಂದಲ ಸೃಷ್ಟಿಸಲಿದೆ. ಮತದಾರರನ್ನು ತಪ್ಪು ದಾರಿಗೆ ಎಳೆಯಲಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಇದು ಅಡ್ಡಿಯಾಗಲಿದೆ ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ಖರ್ಗೆ ಹೇಳಿಕೆ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿರುವ ವ್ಯವಸ್ಥೆಯ ನೈತಿಕ ಸ್ಥೈರ್ಯ ಕೂಡ ಕುಗ್ಗಿಸಲಿದೆ ಎಂದು ಆಯೋಗ ಖರ್ಗೆ ಅವರಿಗೆ ಎಚ್ಚರಿಕೆ ನೀಡಿದೆ.
ಮೊದಲ ಹಂತದ ಲೋಕಸಭೆ ಚುನಾವಣೆ ಕೊನೆಗೊಂಡ ಬಳಿಕ ಮತದಾನ ಪ್ರಮಾಣ ಬಿಡುಗಡೆ ಮಾಡಲು ಆಯೋಗ ವಿಳಂಬ ತಂತ್ರದ ಮೊರೆ ಹೋಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದರು.
ಬಳಿಕ ಕೂಡ ಚುನಾವಣಾ ಆಯೋಗದ ವಿರುದ್ಧ ಖರ್ಗೆ ನಿರಂತರವಾಗಿ ವಾಗ್ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದೀಗ ಖರ್ಗೆ ಅವರ ಹೇಳಿಕೆ ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಈ ಸಂಬಂಧ ಛೀಮಾರಿ ಹಾಕಿ ಖರ್ಗೆ ಅವರಿಗೆ ಎಚ್ಚರಿಕೆ ನೀಡಿದೆ