ಬೆಂಗಳೂರು: ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಹೆಚ್ ಡಿ ರೇವಣ್ಮ ಮನೆಗೆ ಮತ್ತೆ ಎಸ್‌ಐಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ. ಬಸವನಗುಡಿಯಲ್ಲಿರುವ ರೇವಣ್ಣ ನಿವಾಸದಲ್ಲಿ ಇದೀಗ ಪರಿಶೀಲನೆ ಆರಂಭವಾಗಿದೆ. ಎರಡು ಜೀಪ್‌ನಲ್ಲಿ ಆಗಮಿಸಿರುವ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಅಧಿಕಾರಿಗಳು ತಮ್ಮ ಜೊತೆ ಸಂತ್ರಸ್ಥೆಯನ್ನು ಕೂಡ ಕರೆದುಕೊಂಡು ಬಂದಿದ್ದಾರೆ ಎಂದು ವರದಿಯಾಗಿದೆ.
ಇದೀಗ ಎರಡನೆ ಬಾರಿ ರೇವಣ್ಣ ಅವರ ಬಸವನಗುಡಿ ನಿವಾಸದಲ್ಲಿ ಮಹಜರು ನಡೆಸಲಾಗುತ್ತಿದೆ.
ಈ ಬೆಳವಣಿಗೆ ಮಧ್ಯೆ ಪೆನ್ ಡ್ರೈವ್ ಹಗರಣ ಬೆಳಕಿಗೆ ಬಂದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವಕೀಲ ದೇವರಾಜೇಗೌಡ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಯಾರ ಸಂಪರ್ಕಕ್ಕೂ ದೇವರಾಜೇಗೌಡ ಸಿಗುತ್ತಿಲ್ಲ ಎಂದು ವರದಿಯಾಗಿದೆ.
ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿ ಕರೆದಿದ್ದ ದೇವರಾಜೇಗೌಡ ದಿಢೀರನೇ ಪತ್ರಿಕಾಗೋಷ್ಠಿ ರದ್ದುಪಡಿಸಿದ್ದರು.
ಏಪ್ರಿಲ್ ತಿಂಗಳಲ್ಲಿ ದೇವರಾಜೇಗೌಡ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಳೆನರಸೀಪುರದ ಪೊಲೀಸರು ದೇವರಾಜೇಗೌಡರನ್ನು ಹುಡುಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೊಳೆನರಸೀಪುರದ ಪೊಲೀಸರು ಈಗಾಗಲೇ ಬೆಂಗಳೂರಿಗೆ ಬಂದು ಹುಡುಕಾಟ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ದೇವರಾಜೇಗೌಡ ಅವರು ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ರೇವಣ್ಣ ಜೈಲಿನಲ್ಲಿ ಏಕಾಂಗಿಯಾಗಿದ್ದಾರೆ ಎಂದು ವರದಿಯಾಗಿದೆ. ಸಾರ್ವತ್ರಿಕ ರಜೆ ಹಿನ್ನೆಲೆಯಲ್ಲಿ ಸಂದರ್ಶಕರ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ.
ಸೋಮವಾರ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.