ಬೆಂಗಳೂರು: ಬಿಜೆಪಿ ಯುವ ಮೋರ್ಚಾ ನಾಯಕರಾಗಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಎನ್ಐಎ ಯಶಸ್ವಿಯಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮುಸ್ತಫಾ ಪೈಚಾರು ಎನ್ಐಎ ಬಲೆಗೆ ಬಿದಿದ್ದಾನೆ.
ಹತ್ಯೆ ಪ್ರಕರಣದ ಬಳಿಕ ಆರೋಪಿ ಮುಸ್ತಫಾ ತಲೆಮರೆಸಿಕೊಂಡಿದ್ದ. ಹಾಸನ ಜಿಲ್ಲೆಯ ಸಕಲೇಶಪುರದಿಂದ ಆರೋಪಿ ಮುಸ್ತಫಾನನ್ನು ಬಂಧಿಸುವಲ್ಲಿ ಎನ್ಐಎ ಯಶಸ್ವಿಯಾಗಿದೆ.
ಇಂದು ಮುಂಜಾನೆ ಮುಸ್ತಾಫನನ್ನು ಬಂಧಿಸಲಾಗಿದೆ. ಮುಸ್ತಫಾ ಬಂಧನ ಕುರಿತು ಸುಳಿವು ನೀಡುವವರಿಗೆ ಐದು ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಘೋಷಣೆ ಮಾಡಿತ್ತು.
2022 ಜುಲೈ 26 ರಂದು ಪ್ರವೀಣ್ ನೆಟ್ಟಾರು ಅವರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಕೋಳಿ ಅಂಗಡಿ ಮುಚ್ಚಿ ಮನೆೆಗೆ ತೆರಳುತ್ತಿದ್ದ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದರು.
ರಾಜ್ಯದಾದ್ಯಂತ ಈ ಹತ್ಯೆಗೆ ವ್ಯಾಪಕ ಆಕ್ರೋಶವ್ಯಕ್ತವಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಪಟ್ಟಣದಲ್ಲಿ ಹತ್ಯೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಂತಿಮ ದರ್ಶನ ಪಡೆಯಲು ತೆರಳಿದ್ದ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇದ್ದ ಕಾರಿಗೆ ಸ್ಥಳೀಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಲಘ ಲಾಠಿ ಪ್ರಹಾರ ಕೂಡ ನಡೆಸಿದ್ದರು. ಇದೀಗ ಪ್ರಮುಖ ಆರೋಪಿಯ ಬಂಧನದೊಂದಿಗೆ ಹತ್ಯೆಯ ಹಿಂದಿನ ಷಡ್ಯಂತ್ರ ಬಯಲಾಗುವ ಸಾಧ್ಯತೆಇದೆ.