ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಪೂರ್ಣಗೊಂಡ ಬೆನ್ನಲ್ಲೇ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶೀಘ್ರ ಪತನವಾಗಲಿದೆ ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್‌ನ ಬಹುತೇಕ ಶಾಸಕರು ಕ್ಷೇತ್ರದ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಬೇಸರಪಟ್ಟುಕೊಂಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ಸಿಟ್ಟಾಗಿದ್ದಾರೆ ಎಂದು ಅಶೋಕ್ ಆರೋಪಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಬರದ ಹಣ ಕೂಡ ಬಿಡುಗಡೆ ಮಾಡಿಲ್ಲ ಎಂದು ಅಶೋಕ್ ಟೀಕಿಸಿದ್ದಾರೆ.
ನೆರೆಯ ಮಹಾರಾಷ್ಟ್ರದಲ್ಲಿ ಯಾವ ರೀತಿಯ ಬೆಳವಣಿಗೆ ಸಂಭವಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ರಾಜ್ಯದಲ್ಲಿ ಕೂಡ ಕಾಂಗ್ರೆಸ್ ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಅಶೋಕ್ ಬಾಂಬ್ ಸಿಡಿಸಿದ್ದಾರೆ.
ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಮಾತನಾಡಿದ ಅಶೋಕ್, ಇದೀಗ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಟಾಕ್ ವಾರ್ ಆರಂಭವಾಗಿದೆ. ವೈಯಕ್ತಿಕ ಮಟ್ಟದ ಟೀಕೆ ನಡೆಯುತ್ತಿದೆ. ವೈಯಕ್ತಿಕ ಟೀಕೆ ಒಳ್ಳೆಯದಲ್ಲ. ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಅದನ್ನು ಹೊರತುಪಡಿಸಿ ಇತರ ವಿಷಯಗಳ ಚರ್ಚೆ ಅನಗತ್ಯ ಎಂದು ಅಶೋಕ್ ಪ್ರತಿಕ್ರಿಸಿದ್ದಾರೆ.
ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಮುಂದುವರಿಸಿಕೊಂಡು ಹೋಗುವ ಇಚ್ಚೆಯನ್ನು ಕೂಡ ಅಶೋಕ್ ವ್ಯಕ್ತಪಡಿಸಿದ್ದಾರೆ.
ಮುಂಬರುವ ಜಿಲ್ಲಾ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಂಬಂಧ ಉಭಯ ಪಕ್ಷಗಳ ನಾಯಕರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಅಶೋಕ್ ತಿಳಿಸಿದ್ದಾರೆ.