ಬೆಂಗಳೂರು: ಮುಂದಿನ ಐದು ದಿನಗಳ ಕಾಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್ಲ ಜಿಲ್ಲೆಗಳಲ್ಲಿ ಮಳೆ ಅಲರ್ಟ್ ಘೋಷಿಸಲಾಗಿದೆ. ರಾಜ್ಯದಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರಿನ ನಾಗರಿಕರು ಮುಂದಿನ ಐದು ದಿನಗಳ ಕಾಲ ಎಚ್ಚರಿಕೆಯಿಂದ ಇರಬೇಕಾಗಿದೆ. ಬೆಂಗಳೂರಿನಲ್ಲಿ ಮುಂದಿನ ಐದು ದಿನ ಬಿರುಗಾಳಿ ಸಹಿತ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ಈ ಮಾಹಿತಿ ನೀಡಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ನಗರದ ತಗ್ಗುಪ್ರದೇಶಗಳಲ್ಲಿ ಮಳೆ ಸಂಬಂಧಿತ ಸಮಸ್ಯೆಗಳು ಕೂಡ ತಲೆ ದೋರಿವೆ.
ಇದೇ ವೇಳೆ ಚಾಮರಾಜನಗರದಲ್ಲಿ ಇಂದು ಭಾರಿ ಮಳೆಯಾಗಿದೆ. ಅರ್ಧಗಂಟೆ ಗುಡುಗು ಸಹಿತ ಮಳೆಯಾಗಿದೆ. ಮಳೆಯಿಂದ ತಪ್ಪಿಸಿಕೊಳ್ಳಲು ಬಸ್ ನಿಲ್ದಾಣದಲ್ಲಿ ಬೈಕ್ ಸವಾರರು ಆಶ್ರಯಪಡೆಯಬೇಕಾಯಿತು. ಈ ಬಾರಿಯ ಬೇಸಿಗೆಯಲ್ಲಿ ದಾಖಲೆ ಪ್ರಮಾಣದ 39 ಡಿಗ್ರಿ ತಾಪಮಾನ ಚಾಮರಾಜನಗರದಲ್ಲಿ ದಾಖಲಾಗಿತ್ತು.
ಚಿತ್ರದುರ್ಗ ಜಿಲ್ಲೆಯಲ್ಲಿ ಕೂಡ ನಿನ್ನೆ ರಾತ್ರಿ ಭಾರೀ ಮಳೆಯಾಗಿದೆ. ಚಿತ್ರದುರ್ಗ ತಾಲೂಕಿನ ಜೆನಿಗಿ ಹಳ್ಳ ಮಳೆಯಿಂದಾಗಿ ತುಂಬಿ ಹರಿದಿದೆ. ರಾಜ್ಯದಲ್ಲಿ ಸತತ ಮಳೆಯಿಂದಾಗಿ ತಾಪಮಾನ ಮೂರು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ
ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ವರುಣ ಅಬ್ಬರಿಸಿದ್ದಾನೆ.
ಗುಡುಗು, ಬಿರುಗಾಳಿ ಸಹಿತ ಮಳೆ ಸುರಿದಿದೆ.
ಹುಬ್ಬಳ್ಳಿ ,ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಾಗಿದೆ
ಮಳೆಗಾಗಿ ಎದುರು ನೋಡುತ್ತಿದ್ದ ಜನರಲ್ಲಿ ಸಂತಸ ಮನೆಮಾಡಿದೆ