Search

Gowri Kannada Movie: ಇಂದ್ರಜಿತ್ ಲಂಕೇಶ್ ಪುತ್ರ ಅಭಿನಯದ “ಗೌರಿ” ಚಿತ್ರದ ಮೊದಲ ಹಾಡಿನ ಅನಾವರಣ

ಬೆಂಗಳೂರು: ಪತ್ರಕರ್ತ, ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ “ಗೌರಿ” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚಿಗೆ ಬಸವನಗುಡಿಯ ಬಿ.ಎಂ.ಎಸ್ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ, ಸಾವಿರಾರು ವಿದ್ಯಾರ್ಥಿಗಳ ಸಮ್ಮಖದಲ್ಲಿ “ಗೌರಿ” ಚಿತ್ರದ ಮೊದಲ ಹಾಡು ಲೋಕಾರ್ಪಣೆಯಾಯಿತು.

ಇಂದ್ರಜಿತ್ ಲಂಕೇಶ್, ಸಮರ್ಜಿತ್ ಲಂಕೇಶ್, ಸಾನ್ಯಾ ಅಯ್ಯರ್, ಅವಿನಾಶ್, ವಿಷ್ಣು ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿಜಯ್ ಈಶ್ವರ್ ಬರೆದಿರುವ “ಟೈಮ್ ಬರತ್ತೆ” ಎಂಬ ಹಾಡು ಈ ಚಿತ್ರದ ಚೊಚ್ಚಲಗೀತೆಯಾಗಿ ಬಿಡುಗಡೆಯಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ನೀಡಿ, ಹಾಡಿದ್ದಾರೆ. ಯವಜನತೆಗೆ ಹತ್ತಿರವಾಗಿರುವ ಈ ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ಹಾಡು ಬಿಡುಗಡೆ ನಂತರ ಮಾತನಾಡಿದ ನಿರ್ಮಾಪಕ, ನಿರ್ದೇಶಕ ಇಂದ್ರಜಿತ್ ಲಂಕೇಶ್, ಇಂದು “ಗೌರಿ” ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದೆ. ಐದು ಜನ ಸಂಗೀತ ನಿರ್ದೇಶಕರು ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಭಾರತದ ಹನ್ನೆರಡಕ್ಕೂ ಅಧಿಕ ಹೆಸರಾಂತ ಗಾಯಕರು “ಗೌರಿ” ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಇಂದು ಚಂದನ್ ಶೆಟ್ಟಿ ಸಂಗೀತ ನೀಡಿ ಹಾಡಿರುವ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ‌. ಇದರ ಜೊತೆಗೆ ಈ ಹಾಡಿಗೆ ನಾಯಕ ಸಮರ್ಜಿತ್, ನಾಯಕಿ ಸಾನ್ಯಾ ಅಯ್ಯರ್ ಹಾಗೂ ನಟಿ ಸಂಯುಕ್ತ ಹೆಗಡೆ ರೀಲ್ಸ್ ಕೂಡ ಮಾಡಿದ್ದಾರೆ‌. ಈ ಹಾಡಿನ ಲಿರಿಕಲ್ ವಿಡಿಯೋ ಹಾಗೂ ರೀಲ್ಸ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉಳಿದ ಹಾಡುಗಳು ಅನಾವರಣವಾಗಲಿದೆ. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ‌‌ ಎಂದರು.

“ಗೌರಿ” ಚಿತ್ರದ ಮೊದಲ ಹಾಡಿಗೆ ಸಿಗುತ್ತಿರುವ ಮೆಚ್ಚುಗೆಗೆ ಮನ ತುಂಬಿ ಬಂದಿದೆ ನಿಮ್ಮೆಲ್ಲರ ಹಾರೈಕೆ ನಮ್ಮ ಚಿತ್ರಕ್ಕಿರಲಿ ಎಂದರು ನಾಯಕ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನ್ಯಾ ಅಯ್ಯರ್.

More News

You cannot copy content of this page