ವಿಜಯಪುರ: ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ಭೀಕರ ದುರಂತ ಸಂಭವಿಸಿದೆ. ನಾಪತ್ತೆಯಾಗಿದ್ದ ಮೂವರು ಮಕ್ಕಳು ಇದೀಗ ಶವವಾಗಿ ಪತ್ತೆಯಾಗಿದ್ದಾರೆ.
ವಿಜಯಪುರ ನಗರದ ಇಂಡಿ ರಸ್ತೆಯಲ್ಲಿರುವ ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದ ನೀರಿನಲ್ಲಿ ಮಕ್ಕಳ ಶವ ಪತ್ತೆಯಾಗಿದೆ.
ವಿಜಯಪುರ ನಗರದ ಚಾಬಕಸಾಬ್ ದರ್ಗಾ ಬಳಿಯ ಮನೆಯಿಂದ ಮೂವರು ಮಕ್ಕಳು ನಿನ್ನೆ ನಾಪತ್ತೆಯಾಗಿದ್ದರು.
ಗದಗ ಮೂಲದ ಅನುಷ್ಕಾ ಅನೀಲ ದಹಿಂಡೆ (9) ವಿಜಯ ಅನಿಲದಹಿಂಡೆ ( 7), ವಿಜಯಪುರ ಮೂಲದ ಮಿಹಿರ್ ಶ್ರೀಕಾಂತ ಜಾನಗೌಳಿ (7) ಮೃತ ದುರ್ದೈವಿಗಳಾಗಿದ್ದಾರೆ.
ಗದಗ ಮೂಲದ ಅನುಷ್ಕಾ ಹಾಗೂ ವಿಜಯ ಬೇಸಿಗೆ ರಜೆಗಾಗಿ ವಿಜಯಪುರದಲ್ಲಿರುವ ಮಾವನ ಮನೆಗೆ ಬಂದಿದ್ದರು.
ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ವಿಜಯಪುರದ ಚಾಬಕಸಾಬ್ ದರ್ಗಾದ ಬಳಿಯ ಮನೆಯ ಮುಂದೆ ಮಕ್ಕಳು ಎಲ್ಲರೂ ಒಂಟೆ ಸವಾರಿ ಮಾಡಿದ್ದರು.
ಒಂಟೆ ಸವಾರಿ ಬಳಿಕ ಒಂಟೆಗಳನ್ನು ಹುಡುಕಿಕೊಂಡು ಮನೆಯಿಂದ ಹೋಗಿದ್ದರು.ಮಕ್ಕಳು ಮನೆಯಿಂದ ಬೇರೆ ಕಡೆ ಹೋಗುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಮನೆಗೆ ಮಕ್ಕಳು ಬಾರದ ಕಾರಣ ಮನೆಯವರು ಎಲ್ಲ ಕಡೆ ಹುಡುಕಾಡಿದ್ದರು. ಸಾಯಂಕಾಲ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಈ ಸಂಂಬಂಧ ಕುಟುಂಬದವರು ದೂರು ನೀಡಿದ್ದರು.
ನಾಪತ್ತೆಯಾಗಿರುವ ಮಕ್ಕಳಿಗಾಗಿ ಪೋಷಕರು ಸಂಬಂಧಿಕರು ಎಲ್ಲ ಕಡೆ ಹುಟುಕಾಟ ನಡೆಸಿದ್ದರು. ಇದೀಗ ಯುಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದ ನೀರಲ್ಲಿ ಮೂವರು ಮಕ್ಕಳ ಶವ ಪತ್ತೆಯಾಗಿದೆ.
ಯುಜಿಸಿ ತ್ಯಾಜ್ಯ ಜಲದ ಸಂಸ್ಕರಣಾ ಘಟಕದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇದುವೆ ದುರಂತಕ್ಕೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಮಕ್ಕಳ ಸಾವಿನ ಕುರಿತಂತೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.