Chetan Chandra: ಪೂರ್ವ ಯೋಜಿತ ಸಂಚಿನ ಭಾಗವಾಗಿ ನನ್ನ ಮೇಲೆ ಹಲ್ಲೆ: ನಟ ಚೇತನ್ ಚಂದ್ರ ಆರೋಪ

ಬೆಂಗಳೂರು: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಟ ಚೇತನ್ ಚಂದ್ರ ಮೇಲೆ ದುಷ್ಕರ್ಮಿಗಳ ತಂಡ ಗಂಭೀರವಾಗಿ ಹಲ್ಲೆ ನಡೆಸಿದೆ. ಕನಕಪುರ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಚೇತನ್ ಚಂದ್ರ ಇದೊಂದು ಪೂರ್ವ ಯೋಜಿತ ಸಂಚು ಎಂದು ಅಭಿಪ್ರಾಯಪಟ್ಟಿದ್ದಾರೆ.
ಓರ್ವ ವ್ಯಕ್ತಿ ಬೈಕ್‌ನಲ್ಲಿ ನನ್ನ ಕಾರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ. ಸ್ವಲ್ಪ ದೂರ ಸಾಗಿದ ಮೇಲೆ ಬೈಕ್‌ ಕಾರಿಗೆ ಅಡ್ಡವಾಗಿ ಇರಿಸಿದ್ದ. ಬೈಕ್ ತೆಗೆಯಲು ಕಾರಿನ ಚಾಲಕ ಮನವಿ ಮಾಡಿದ್ದ. ಅಷ್ಟು ಹೇಳಿದ್ದಕ್ಕೆ ನನ್ನ ಕಾರಿನ ಚಾಲಕನ ಮೇಲೆ ಹಲ್ಲೆ ನಡೆಸಲಾಯಿತು.
ತಕ್ಷಣ ನಾನು ಕಾರಿನಿಂದ ಕೆಳಗಿಳಿದೆ. ನಾನು ಕೆಳಗಿಳಿದು ಆರೋಪಿಗೆ ಹೊಡೆದೆ. ತಕ್ಷಣ ಅಲ್ಲಿಗೆ ಮಹಿಳೆಯೊಬ್ಬರು ಬಂದರು. ಆ ಬಳಿಕ 15 ಜನರ ಗುಂಪು ತಕ್ಷಣ ಸ್ಥಳಕ್ಕೆ ಬಂದು ಸೇರಿತ್ತು.

ಮಹಿಳೆ ಮೇಲೆ ಹಲ್ಲೆ ಮಾಡುತ್ತೀಯ ಎಂದು ಹೇಳಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಕತ್ತಿನಲ್ಲಿದ್ದ ಚೈನ್ ಕಿತ್ತುಕೊಂಡಿದ್ದಾರೆ. ನನ್ನ ಬಳಿ ಇದ್ದ 1ಲಕ್ಷದ 80 ಸಾವಿರ ಹಣ ದರೋಡೆ ಮಾಡಿದ್ದಾರೆ.
ಗಾಯಗೊಂಡಿರುವ ನಾನು ಕೊಣನಕುಂಟೆ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ
ಮುಖಕ್ಕೆ ಪೆಟ್ಟಾಗಿದೆ. ಮೂಗಿನ‌ಮೂಳೆ ಮುರಿದಿದೆ. ವೈದ್ಯರು ಈ ಸಂಬಂಧ ಮಾಹಿತಿ ನೀಡಿದ್ದಾರೆ. ಆ ಗುಂಪಿನಲ್ಲಿದ್ದ ವ್ಯಕ್ತಿಗಳನ್ನು ನಾನು ಇದುವರೆಗೂ ನೋಡಿಲ್ಲ ಎಂದು ನಟ ಚೇತನ್ ಚಂದ್ರ ಹೇಳಿದ್ದಾರೆ.
ಘಟನಾವಳಿಗಳನ್ನು ನೋಡಿದರೆ ಇದೊಂದು ಪೂರ್ವ ಯೋಜಿತ ಸಂಚು ಎಂದು ಅನಿಸುತ್ತಿದೆ. ಘಟನೆಯಿಂದ ನನಗೆ ಗಾಬರಿಯಾಗಿದೆ ಎಂದು ನಟ ಚೇತನ್ ಚಂದ್ರ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

More News

You cannot copy content of this page