ಮುಂಬೈ: ರಾಜ್ಯದ ಕಾಂಗ್ರೆಸ್ ಸರ್ಕಾರದ ಅಸ್ತಿತ್ವಕ್ಕೆ ಸವಾಲು ಹಾಕುವ ಹೇಳಿಕೆಯನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೀಡಿದ್ದಾರೆ. ಸತಾರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಏಕನಾಥ್ ಶಿಂಧೆ, ಕರ್ನಾಟಕದಲ್ಲಿ ಶೀಘ್ರ ಸರ್ಕಾರ ಪತನಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಕರ್ನಾಟಕಕ್ಕೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದೆ. ಈ ವೇಳೆ ಕರ್ನಾಟಕದ ಬಿಜೆಪಿ ನಾಯಕರು ಶೀಘ್ರದಲ್ಲಿ ಸರ್ಕಾರ ಪತನವಾಗಲಿದೆ ಎಂಬ ಮಾತು ಹೇಳಿದ್ದರು. ಸರ್ಕಾರ ಪತನಗೊಳಿಸುವ ನಿಟ್ಟಿನಲ್ಲಿ ತಮ್ಮ ಅನುಭವ ನೆರವಿಗೆ ಬರಲಿದೆ ಎಂದು ಕೂಡ ಹೇಳಿದ್ದರು.
ಮಹಾರಾಷ್ಟ್ರದಲ್ಲಿ ಈ ಹಿಂದೆ ನಡೆದ ರಾಜಕೀಯ ಕ್ರಾಂತಿ ಹಿನ್ನೆಲೆಯಲ್ಲಿ ಸರ್ಕಾರ ಪತನ ಪ್ರಕ್ರಿಯೆಯಲ್ಲಿ ನೆರವು ನೀಡುವಂತೆ ಕರ್ನಾಟಕದ ಬಿಜೆಪಿ ನಾಯಕರು ಮನವಿ ಮಾಡಿದ್ದರು. ಇದಕ್ಕೆ ನಾನು ಸ್ಪಂದಿಸಿದ್ದೇನೆ. ಚುನಾವಣೆ ಬಳಿಕ ಕರ್ನಾಟಕಕ್ಕೆ ತೆರಳುವ ಸಾಧ್ಯತೆ ಇದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಸಾಧನೆ ಪ್ರದರ್ಶಿಸಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವ ಕಳೆದುಕೊಳ್ಳಲಿದೆ ಎಂಬ ಮಾತು ಹರಿದಾಡುತ್ತಿರುವಂತೆಯೇ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಈ ರೀತಿಯ ಹೇಳಿಕೆ ನೀಡಿರುವುದು ಭಾರೀ ಕುತೂಹಲ ಕೆರಳಿಸಿದೆ.
ರಾಜ್ಯದಲ್ಲಿ ಸದ್ಯಕ್ಕೆ ಕಾಂಗ್ರೆಸ್ ಬಳಿ ಸುಭದ್ರ ಸರ್ಕಾರಕ್ಕೆ ಅಗತ್ಯ ಇರುವ ಸಂಖ್ಯಾಬಲ ಇದೆ. ರಾಜಕೀಯ ಪವಾಡ ನಡೆದರೆ ಮಾತ್ರ ಕಾಂಗ್ರೆಸ್ ಸರ್ಕಾರ ಪತನವಾಗಲು ಸಾಧ್ಯ. ಇದನ್ನು ಹೊರತುಪಡಿಸಿ ರಾಜ್ಯದಲ್ಲಿ ಭದ್ರವಾಗಿ ಬೇರೂರಿರುವ ಸರ್ಕಾರ ಪತನ ಅಸಾಧ್ಯ.
ಮಹಾರಾಷ್ಟ್ರ ಮುಖ್ಮಮಂತ್ರಿ ಏಕನಾಥ್ ಶಿಂಧೆ ಹೇಳಿಕೆಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಇದುವರೆಗೆ ಗಂಭೀರವಾಗಿ ಪರಿಗಣಿಸಿಲ್ಲ.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ರಾಜಕೀಯ ಲಾಭಕ್ಕೆ ಈ ಹೇಳಿಕೆ ನೀಡಿದ್ದಾರೆ ಎನ್ನುವುದು ಕೆಲವು ಕಾಂಗ್ರೆಸ್ ನಾಯಕರ ಆರೋಪ
ಒಂದಂತೂ ಸತ್ಯ ಜೂನ್ 4ರ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗುವ ಎಲ್ಲ ಸಾಧ್ಯತೆ ಹೆಚ್ಚಾಗಿದೆ.