Search

MB PATIL ON EKNATH SHINDE: ಏಕನಾಥ ಶಿಂದೆ ಮೊದಲು ಸಂವಿಧಾನ, ಕಾಯ್ದೆ ಓದಿಕೊಳ್ಳಲಿ: ಎಂ ಬಿ ಪಾಟೀಲ

ಬೆಂಗಳೂರು: ಲೋಕಸಭೆ ಚುನಾವಣೆಯ ಬಳಿಕ ಕರ್ನಾಟಕ ಸರಕಾರ ಉರುಳಿ ಬೀಳಲಿದೆ ಎನ್ನುತ್ತಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಮೊದಲು ಸಂವಿಧಾನ ಮತ್ತು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಅರ್ಥ ಮಾಡಿಕೊಳ್ಳಲಿ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಈ ಬಗ್ಗೆ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಅವರು ಇಲ್ಲಿ ಉತ್ತರಿಸಿದರು.

ಲೋಕಸಭಾ ಚುನಾವಣೆ ನಂತರ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ 20 ಶಾಸಕರು ಕಾಂಗ್ರೆಸ್ಸನ್ನು ಸೇರಲಿದ್ದು, ಅವರೆಲ್ಲರೂ ನಮ್ಮ ಸಂಪರ್ಕದಲ್ಲಿ ಇದ್ದಾರೆ. ಸರಕಾರ ಬೀಳಿಸಲು ಇದು ಮಹಾರಾಷ್ಟ್ರವಲ್ಲ. ಜೂನ್ ಮೊದಲ ವಾರದ ನಂತರ ಶಿಂದೆ ಅವರ ಸರಕಾರವೇ ಪತನವಾಗಿ, ಅವರೇ ಮಾಜಿ ಆಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.

ರಾಜ್ಯದಲ್ಲಿ ನಾವು 136 ಶಾಸಕರಿದ್ದೇವೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ನಮ್ಮ 89 ಶಾಸಕರು ಬಿಜೆಪಿಗೆ ಹೋಗಬೇಕು. ಈಗ ಬೇರೆ ಪಕ್ಷಕ್ಕೆ ಹೋಗುವ ದಡ್ಡರು ಯಾರೂ ಇಲ್ಲ ಎಂದು ಅವರು ವಿವರಿಸಿದರು.

ಏಕನಾಥ ಶಿಂದೆಗೆ ಶಕ್ತಿ ಇದ್ದರೆ ನಮ್ಮ ಐದು ಶಾಸಕರನ್ನು ಮೊದಲು ತಮ್ಮತ್ತ ಸೆಳೆದುಕೊಂಡು ತೋರಿಸಲಿ. ಇನ್ನು ಒಂದೆರಡು ತಿಂಗಳಲ್ಲಿ ಆ ರಾಜ್ಯದಲ್ಲಿ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾವಿಕಾಸ ಅಘಾಡಿ ಮೈತ್ರಿಕೂಟದ ಸರಕಾರ ಬರಲಿದೆ ಎಂದು ಪಾಟೀಲ ಹೇಳಿದ್ದಾರೆ.

More News

You cannot copy content of this page