HD Revanna Released From Jail: 6 ದಿನಗಳ ಪರಪ್ಪನ ವಾಸ ಅಂತ್ಯ, ಜೈಲಿನಿಂದ ಹೆಚ್ .ಡಿ. ರೇವಣ್ಣ ಬಿಡುಗಡೆ

ಬೆಂಗಳೂರು: ಮಹಿಳೆಯೊಬ್ಬರ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿದ್ದ ಹೆಚ್ . ಡಿ. ರೇವಣ್ಣ ಕೊನೆಗೂ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸೋಮವಾರ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರೇವಣ್ಣಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಸಾಕ್ಷ್ಯ ನಾಶಮಾಡಬಾರದು, ಐದು ಲಕ್ಷ ರೂ. ಶ್ಯೂರಿಟಿ ನೀಡಬೇಕು , ಇಬ್ಬರ ಜಾಮೀನು ನೀಡುವಂತೆ ಆದೇಶ ನೀಡಿತ್ತು. ಇಂದು ಮುಂಜಾನೆ ರೇವಣ್ಣ ಪರ ವಕೀಲರು ಜಾಮೀನು ಆದೇಶ ಕುರಿತಂತೆ ಎಲ್ಲ ಷರತ್ತುಗಳನ್ನು ಪೂರೈಸಿದ್ದರು. ಬಳಿಕ ಕೋರ್ಟಿನ ಆದೇಶದ ಪ್ರತಿ ಜೈಲು ಅಧಿಕಾರಿಗಳಿಗೆ ನೀಡಲಾಯಿತು.

ಇದೀಗ ರೇವಣ್ಣ ಜೈಲಿನಿಂದ ಬಿಡುಗಡೆಯಾಗಿದ್ದು, ನೇರವಾಗಿ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ಆಗಮಿಸಿದ್ದಾರೆ. ಪುತ್ರ ರೇವಣ್ಣ ಮನೆಗೆ ಬಂದಾಗ ದೇವೇಗೌಡ ಅವರು ತುಂಬಾ ಭಾವುಕರಾಗಿದ್ದರು. ತಂದೆ ತಾಯಿಯ ಆಶೀರ್ವಾದ ಪಡೆದ ರೇವಣ್ಣ ಇದೀಗ ದೇವೇಗೌಡರ ಮನೆಯಲ್ಲಿ ಇದ್ದಾರೆ.
ರೇವಣ್ಣ ಹೊಳೆ ನರಸೀಪುರಕ್ಕೆ ಹೋಗುವ ಸಾಧ್ಯತೆ ಇದೆ.
ತಂದೆ ರೇವಣ್ಣ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲರ ಕಣ್ಣು ಇದೀಗ ಪುತ್ರ ಪ್ರಜ್ವಲ್ ರೇವಣ್ಣ ಮೇಲೆ ನೆಟ್ಟಿದೆ. ಕಳೆದ 18 ದಿನಗಳಿಂದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಪ್ರಜ್ವಲ್ ರೇವಣ್ಣ ಬಂಧನಕ್ಕೆ ಬ್ಲೂ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಆದರೂ ಇದುವರೆಗೆ ನಿರೀಕ್ಷಿತ ಯಶಸ್ಸು ದೊರೆತಿಲ್ಲ. ತಂದೆಗೆ ಜಾಮೀನು ದೊರೆತ ಕಾರಣ ಪ್ರಜ್ವಲ್ ಭಾರತಕ್ಕೆ ಆಗಮನ ಸಾಧ್ಯತೆ ಹೆಚ್ಚಾಗಿದೆ ಎಂದು ವರದಿಯಾಗಿದೆ.

ಇದೇ ವೇಳೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಕೀಲ ದೇವರಾಜೇಗೌಡ ಅವರನ್ನು ಯಾಕಾಗಿ ಇದೀಗ ಬಂಧಿಸಲಾಗಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ದೊಡ್ಡ ತಿಮಿಂಗಿಲ ಕುರಿತು ಆಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅಲ್ಲಿಯ ತನಕ ಯಾವುದೇ ಪಟಾಕಿ ಸಿಡಿಸಬೇಡಿ ಎಂದು ಕುಮಾರಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ದೇವೇಗೌಡ ಕುಟುಂಬಕ್ಕೆ ಮಸಿ ಬಳಿಯುವ ಷಡ್ಯಂತ್ರ ನಡೆದಿದೆ. ಅದರ ಭಾಗವಾಗಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಎಸ್ಐಟಿ ತನಿಖೆಯ ಕಾರ್ಯವೈಖರಿ ಕುರಿತಂತೆ ಕೂಡ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಎಸ್ಐಟಿ ತನಿಖೆ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಪೆನ್ ಡ್ರೈವ್ ವೈರಲ್ ಮಾಡಿದ್ದ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಇದೇ ವೇಳೆ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ ಕೆ ಶಿವಕುಮಾರ್, ಅವರ ಕುಟುಂಬದಲ್ಲಿ ಸಂಭವಿಸಿದ ಬೆಳವಣಿಗೆ ಬಗ್ಗೆ ನನಗೆ ವಿಷಾದವಿದೆ ಎಂದು ಹೇಳಿದ್ದಾರೆ. ಯಾರಿಗೂ ಕೂಡ ತೊಂದರೆ ಕೊಡುವ ಮನಸ್ಥಿತಿ ನನ್ನದಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಕುಮಾರ ಸ್ವಾಮಿ ಮಾಡಿರುವ ಆರೋಪಗಳಿಗೆ ವಿಧಾನಸಭೆಯಲ್ಲಿ ಪ್ರತ್ಯತ್ತರ ನೀಡುವುದಾಗಿ ಶಿವಕುಮಾರ್ ಘೋಷಿಸಿದ್ದಾರೆ.
ಈ ಬೆಳವಣಿಗೆ ಮಧ್ಯೆ ವಕೀಲ ದೇವರಾಜೇಗೌಡನನ್ನು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಹಾಸನ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ್ದ ಪೊಲೀಸ್ ತಂಡ ವಕೀಲ ದೇವರಾಜೇಗೌಡನನ್ನು ವಶಕ್ಕೆ ತೆಗೆದುಕೊಂಡಿದೆ. ಹಾಸನದ ನ್ಯಾಯಾಲಯದ ಆದೇಶದಂತೆ ಈ ಬೆಳವಣಿಗೆ ಸಂಭವಿಸಿದೆ

More News

You cannot copy content of this page