ಬೆಂಗಳೂರು: ಮಹಿಳೆ ಕಿಡ್ನಾಪ್ ಪ್ರಕರಣ ಸಂಬಂಧ ಬಂಧನದಲ್ಲಿದ್ದ ಹೆಚ್ ಡಿ ರೇವಣ್ಣ ಇದೀಗ ಜಾಮೀನು ಪಡೆದು ಹೊರಬಂದಿದ್ದಾರೆ. ಮೊದಲು ಪದ್ಮನಾಭನಗರದ ನಿವಾಸಕ್ಕೆ ಭೇಟಿ ನೀಡಿದ ಹೆಚ್ ಡಿ ರೇವಣ್ಣ ತಂದೆ ದೇವೇಗೌಡ ಮತ್ತು ತಾಯಿ ಚನ್ನಮ್ಮ ಅವರ ಆಶೀರ್ವಾದ ಪಡೆದರು. ಪದ್ಮನಾಭ ನಗರದ ನಿವಾಸದ ಬಳಿ ನೆರೆದಿದ್ದ ಕಾರ್ಯಕರ್ತರನ್ನು ಕಂಡು ರೇವಣ್ಣ ಭಾವುಕರಾದರು. ಹೊಳೆನರಸೀಪುರದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೇವಣ್ಣ ಅಭಿಮಾನಿಗಳು ಮನೆ ಮುಂದೆ ಸೇರಿದ್ದರು. ಮನೆಯ ಬಳಿ ಸೇರಿದ್ದ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದರು. ಜಿಲ್ಲೆಯ ಹೆಣ್ಣು ಮಕ್ಕಳ ಮಾನ ಹರಾಜುಹಾಕಿದ್ದಾರೆ. ಇದಕ್ಕೆ ಉಭಯ ನಾಯಕರು ಸೂಕ್ತ ಬೆಲೆ ತೆರಬೇಕಾಗಲಿದೆ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಬಳಿಕ ಮನೆ ಒಳಗೆ ಪ್ರವೇಶಿಸಿದ ರೇವಣ್ಣ ದೇವೇಗೌಡರ ಜೊತೆ ಸಮಾಲೋಚನೆ ನಡೆಸಿದರು. ಕೆಲವು ಹೊತ್ತು ಮಾತುಕತೆ ನಡೆಸಿದ ರೇವಣ್ಣ ಬಳಿಕ ಮನೆಯಿಂದ ಹೊರಬಂದರು. ಬಳಿಕ ಜೆಪಿ ನಗರ ಲಕ್ಷ್ಮೀವೆಂಕಟೇಶ್ವರ ದೇಗುಲಕ್ಕೆ ಹೆಚ್.ಡಿ.ರೇವಣ್ಣ ಭೇಟಿ ನೀಡಿದರು. ದೇವರಿಗೆ ರೇವಣ್ಣ ವಿಶೇಷ ಪೂಜೆ ಸಲ್ಲಿಸಿದರು.
ದೇವೇಗೌಡ ಅವರ ಕುಟುಂಬ ಸದಸ್ಯರ ಪೈಕಿ ರೇವಣ್ಣ ಅವರು ಜೋತಿಷ್ಯ ಮತ್ತು ದೇವರಲ್ಲಿ ಹೆಚ್ಚಿನ ನಂಬಿಕೆ ಇರಿಸಿದ್ದಾರೆ. ಯಾವುದೇ ಕೆಲಸ ಮಾಡುವ ಮೊದಲು ಅವರು ಮುಹೂರ್ತ ನೋಡುತ್ತಾರೆ. ಶುಭ ಘಳಿಗೆಯಲ್ಲಿ ಎಲ್ಲ ಕೆಲಸ ಮಾಡುತ್ತಾರೆ. ಇದು ಹೆಚ್ ಡಿ ರೇವಣ್ಣ ಬೆಳೆದು ಬಂದಿರುವ ಹಾದಿ.
ರೇವಣ್ಣ ಜಾಮೀನು – ಮುಂದೇನು?
ಹೆಚ್ ಡಿ ರೇವಣ್ಣ ಜಾಮೀನು ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಕಾನೂನಿನ ಮೊದಲ ಸುತ್ತಿನ ಹೋರಾಟದಲ್ಲಿ ದೇವೇಗೌಡ ಕುಟುಂಬಕ್ಕೆ ಜಯ ದೊರೆತಿದೆ. ಇದೀಗ ಮುಂದಿನ ಹೋರಾಟಕ್ಕೆ ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಪದ್ಮನಾಭ ನಗರದ ನಿವಾಸದಲ್ಲಿ ದೇವೇಗೌಡರ ಜೊತೆ ಕುಮಾರಸ್ವಾಮಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ರೇವಣ್ಣ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಲು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸುವ ಸಾಧ್ಯತೆ ಇದೆ. ಸಿಆರ್‌ಪಿಸಿ 482ನೇ ಅಡಿ ಅನ್ವಯ ಹೈಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸಲಾಗಿದೆ. ಶೀಘ್ರದಲ್ಲಿ ಈ ಸಂಬಂಧ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇದೇ ವೇಳೆ ಪರಪ್ಪನ ಅಗ್ರಹಾರದ ಬಳಿ ಸೇರಿದ್ದ ಜೆಡಿಎಸ್ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಜೆಡಿಎಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಜೈಲಿನ ಬಳಿ ಜೆಡಿಎಸ್ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.