ನವದೆಹಲಿ: ಇತ್ತೀಚಿನ ದಿನಗಳಲ್ಲಿ ಕೇಂದ್ರ ತನಿಖಾಸಂಸ್ಥೆಗಳ ಹೆಸರಿನಲ್ಲಿ ಜನರನ್ನು ವಂಚಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ. ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ, ಎನ್‌ಸಿಬಿ, ಎನ್ಐಎ ಸೇರಿದಂತೆ ಹಲವು ತನಿಖಾ ಸಂಸ್ಥೆಗಳ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಖಾತೆ ಜನರಿಗೆ ಎಚ್ಚರಿಕೆ ನೀಡಿದೆ. ಈ ಸಂಬಂಧ ಜನ ಸಾಮಾನ್ಯರು ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.
ಹೆಚ್ಚಾಗಿ ಮಹಾನಗರಗಳಲ್ಲಿ ಕೆಲವುನಿರ್ದಿಷ್ಟ ಜನರನ್ನು ಗುರಿಯಾಗಿರಿಸಿಕೊಂಡು ಈ ಕೃತ್ಯ ಎಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.
ಹೊರ ದೇಶಗಳಿಂದ ಕಾರ್ಯಾಚರಣೆ
ಹೊರ ದೇಶಗಳಲ್ಲಿಸಕ್ರಿಯವಾಗಿರುವ ಜಾಲ ಈ ವಂಚನೆ ಜಾಲದ ಹಿಂದೆ ಇದೆ ಎಂದು ಶಂಕಿಸಲಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳ ಹೆಸರು ಹೇಳಿಕೊಂಡು ಕೆಲವು ದುಷ್ಟರು ಮೊದಲಿಗೆ ದೂರವಾಣಿ ಕರೆ ಮಾಡುತ್ತಾರೆ. ನೀವು ಇತ್ತೀಚೆಗೆ ಹೊರದೇಶಕ್ಕೆ ಕಳುಹಿಸಿದ ಪಾರ್ಸೆಲ್‌ನಲ್ಲಿ ಮಾದಕ ದ್ರವ್ಯ ಇತ್ತು. ಅದನ್ನು ವಶಪಡಿಸಿಕೊಳ್ಳಲಾಗಿದೆ. ನಿಮ್ಮನ್ನು ಈ ಪ್ರಕರಣದಿಂದ ಬಿಡುಗಡೆ ಮಾಡಲು ಹಣ ನೀಡಬೇಕು ಎಂದು ಬೇಡಿಕೆ ಇಡುತ್ತಾರೆ. ಕರೆ ಸ್ವೀಕರಿಸಿದ ವ್ಯಕ್ತಿ ದುರ್ಬಲ ಮನಸ್ಸಿನ ವ್ಯಕ್ತಿಯಾದರೆ ಒಂದು ಕ್ಷಣ ಗೊಂದಲಕ್ಕೆ ಒಳಗಾಗುತ್ತಾನೆ. ನಕಲಿ ಅಧಿಕಾರಿ ಹೇಳಿದ್ದ ಎಲ್ಲ ಮಾತನ್ನು ಆ ಮುಗ್ಧ ವ್ಯಕ್ತಿ ನಂಬುತ್ತಾನೆ. ಇದನ್ನು ಕ್ಷಣಾರ್ಧದಲ್ಲಿ ಪೋನ್ ಕರೆ ಮಾಡಿದ ವ್ಯಕ್ತಿ ಗ್ರಹಿಸುತ್ತಾನೆ. ಅಲ್ಲಿಂದ ಬೇಡಿಕೆ ಪಟ್ಟಿ ಹೆಚ್ಚಾಗುತ್ತದೆ. ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾಗುತ್ತಾರೆ. ಎಲ್ಲವೂ ಆನ್ ಲೈನ್ ಮೂಲಕ ಪಾವತಿಯಾಗುತ್ತದೆ.
ಬೆಂಗಳೂರಿನಲ್ಲಿ ಕೂಡ ಹಲವು ಮಂದಿ ಇದೇ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ದೇಶದ ಮಹಾ ನಗರ ಮತ್ತು ಎರಡನೆ ಶ್ರೇಣಿಯ ನಗರಗಳನ್ನು ಗುರಿಯಾಗಿರಿಸಿಕೊಂಡು ಖದೀಮರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಈ ಜಾಲ ಮಟ್ಟಹಾಕಲು ಈ ಕೃತ್ಯಕ್ಕೆ ಬಳಸಲಾಗುತ್ತಿದ್ದ ಸ್ಕೈಪ್ ಲಿಂಕ್ ಬ್ಲಾಕ್ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಆದರೆ ವಂಚನೆ ಪ್ರಕರಣಕ್ಕೆ ಪೂರ್ಣ ಕಡಿವಾಣ ಹಾಕಲು ಇದುವರೆಗೂ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಮನವಿ ಮಾಡಿದೆ. ಕೇವಲ ಸಾರ್ವಜನಿಕರ ಸಹಕಾರ ದೊರೆತರೆ ಮಾತ್ರ ಇಂತಹ ಜಾಲ ಮಟ್ಟ ಹಾಕಲು ಸಾಧ್ಯ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಜಾಗೃತಿ ಜನರಲ್ಲಿ ಮೂಡಬೇಕು. ಯಾವುದೇ ಸಂಶಯಾಸ್ಪದ ಕರೆಗಳಿಗೆ ಉತ್ತರಿಸಲು ಹೋಗಬೇಡಿ. ಸಂಶಯ ಬರುವ ಲಿಂಕ್ ಕ್ಲಿಕ್ ಮಾಡಬೇಡಿ. ಸೈಬರ್ ಮೋಸಕ್ಕೆ ಬಲಿಯಾಗದಿರಿ ಎಂದು ಕೇಂದ್ರ ಗೃಹ ಸಚಿವಾಲಯ ಜನರಿಗೆ ಎಚ್ಚರಿಕೆ ನೀಡಿದೆ