ವಾರಾಣಸಿ: ದೇಶದಲ್ಲಿ ಲೋಕಸಭೆ ಚುನಾವಣೆ ಅತ್ಯುನ್ನತ ಹಂತ ತಲುಪಿದೆ. ಚುನಾವಣಾ ಕಣಕ್ಕೆ ಧುಮುಕಿರುವ ಪ್ರಧಾನಿ ನರೇಂದ್ರ ಮೋದಿ ಇಂದು ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಿಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸೋಮವಾರ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದ ಮೋದಿ ಇಂದು ಮುಂಜಾನೆಯಿಂದಲೇ ವಾರಾಣಸಿಯಲ್ಲಿ ದಶಾಶ್ವಮೇಧಘಾಟ್ , ಕಾಲಭೈರವ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸಿದ ಬಳಿಕ ಬೆಳಿಗ್ಗೆ 11. 40ರ ಹೊತ್ತಿಗೆ ಅಭಿಜಿತ್ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಪ್ರಧಾನಿಗೆ ಸಾಥ್ ನೀಡಿದರು. ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿ ಪ್ರಧಾನಿ ನರೇಂದ್ರ ಮೋದಿ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಪ್ರಧಾನಿ ವಾರಾಣಸಿ ಸಂಸದರಾದ ಬಳಿಕ ವಾರಾಣಸಿಯ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಜಾರಿಗೊಳಿಸಿದ್ದರು.
ಕಾಶಿ ಕಾರಿಡಾರ್ ಅಭಿವೃದ್ದಿಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ವಿಶ್ವ ಭೂಪಟದಲ್ಲಿ ವಾರಾಣಸಿ ಸ್ಥಾನ ಪಡೆಯುವಂತೆ ಮಾಡಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಾರಾಣಸಿ ಕ್ಷೇತ್ರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಸಿಎಂಗಳು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ , ಗೃಹ ಸಚಿವ ಅಮಿತ್ ಷಾ ನಾಮಪತ್ರ ಸಲ್ಲಿಕೆ ವೇಳೆ ಸಾಥ್ ನೀಡಿದ್ದರು.
ಲೋಕಸಭೆ ಚುನಾವಣೆಯ ಅಂತಿಮ ಹಂತದಲ್ಲಿ ವಾರಾಣಸಿಯಲ್ಲಿ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 400 ಪ್ಲಸ್ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಇದೇ ಮಾತನ್ನು ಘೋಷವಾಕ್ಯವಾಗಿ ಪರಿವರ್ತಿಸಿದೆ.
ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಉತ್ತರಪ್ರದೇಶ ನಿರ್ಣಾಯಕ ರಾಜ್ಯವಾಗಿದೆ. ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಉತ್ತರಪ್ರದೇಶ ಹೊಂದಿದೆ. ಮೋದಿ ಉತ್ತರಪ್ರದೇಶದಲ್ಲಿ ಸ್ಪರ್ಧಿಸುತ್ತಿರುವ ಕಾರಣ ಅದರ ಪ್ರಭಾವ ಇತರ ಕ್ಷೇತ್ರಗಳ ಮೇಲೂ ಬೀರಲಿದೆ ಎಂಬುದು ಬಿಜೆಪಿ ನಾಯಕರ ವಿಶ್ವಾಸವಾಗಿದೆ.
ಈ ಎಲ್ಲ ಪ್ರಶ್ನೆಗಳಿಗೆ ಜೂನ್ 4ರಂದು ಉತ್ತರದೊರೆಯಲಿದೆ. ನಾನಾಗಿ ಇಲ್ಲಿಗೆ ಬಂದಿಲ್ಲ. ಕಾಶಿ ವಿಶ್ವನಾಥನೇ ನನ್ನನ್ನು ಕರೆಯಿಸಿದ್ದಾನೆ ಎಂದು ಪ್ರಧಾನಿ ಮೋದಿ ಈಗಾಗಲೇ ಹೇಳಿದ್ದಾರೆ. ದೇಶದ ಜನರ ಗಮನ ಇದೀಗ ವಾರಾಣಸಿಯತ್ತ ನೆಟ್ಟಿದೆ.